ಗದಗ: ಇಲಾಖೆಗೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದಿರುವುದು ಹಾಗೂ ಉಪಗುತ್ತಿಗೆದಾರರ ನಿರಂತರ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಗಿ ಆರೋಪಿಸಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್ಐಡಿಎಲ್) ಗದಗ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಫರ್ವೇಜ್ ಧಾರವಾಡ ಅವರು ಡೆತ್ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಾಪತ್ತೆಯಾಗುವ ಮುನ್ನ ಸೆ.12ರಂದು ಬೆಂಗಳೂರಿನ ಕೆಆರ್ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಫರ್ವೇಜ್ ಅವರು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಉಪವಿಭಾಗಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಉಪಗುತ್ತಿಗೆದಾರರು ಪ್ರತಿನಿತ್ಯ ಮನೆ ಹಾಗೂ ಕಚೇರಿಗೆ ಬಂದು ಗಲಾಟೆ ಮಾಡುತ್ತಿದ್ದು, ಫೋನ್ ಕರೆಗಳ ಮೂಲಕವೂ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಉಪವಿಭಾಗಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಿ, ಬೇರೆ ಎಇಇಯನ್ನು ನಿಯೋಜಿಸಬೇಕು. ತಮ್ಮ ಕುಟುಂಬಕ್ಕೆ ಯಾರೂ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕೆಲವು ಹಳೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬೇರೆ ಇಲಾಖೆಯಿಂದ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕೆಆರ್ಐಡಿಎಲ್ನಿಂದಲೇ ಸುಮಾರು ₹6 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಹಣ ಬಿಡುಗಡೆ ಮಾಡುವಂತೆ ಹಲವು ಬಾರಿ ಪತ್ರ ಬರೆದಿದ್ದರೂ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಕೆಲವು ಕಾಮಗಾರಿಗಳ ಅನುದಾನವನ್ನು ಕೇಂದ್ರ ಕಚೇರಿಯಿಂದಲೇ ಬಿಡುಗಡೆ ಮಾಡಲಾಗಿಲ್ಲ ಎಂದು ಫರ್ವೇಜ್ ಅವರು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಸೆ.13ರಂದು ಬೆಂಗಳೂರಿನಲ್ಲಿ ಇಲಾಖೆಯ ಸಭೆ ಇದೆ ಎಂದು ಹೇಳಿ ತೆರಳಿದ್ದ ಫರ್ವೇಜ್, ಬೆಂಗಳೂರು ತಲುಪಿರುವುದಾಗಿ ಪತ್ನಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಬಳಿಕ ಅವರ ಮೊಬೈಲ್ ಸ್ವಿಚ್ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಫರ್ವೇಜ್ ಅವರು ಕಚೇರಿಗೆ ಬಂದಿಲ್ಲ ಎಂಬುದು ತಿಳಿದುಬಂದಿದೆ.

ಈ ನಡುವೆ ಅವರ ಕಚೇರಿಯನ್ನು ಪರಿಶೀಲಿಸಿದಾಗ ಡೆತ್ನೋಟ್ ಪತ್ತೆಯಾಗಿದೆ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಸೆ.16ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಫರ್ವೇಜ್ ಧಾರವಾಡ ಅವರು ಪತ್ನಿ, ಪುತ್ರಿ, ತಂದೆ, ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ. ಡೆತ್ನೋಟ್ನಲ್ಲಿ ಆತ್ಮಹತ್ಯೆಯ ಅಂಶ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದು, ಕೂಡಲೇ ವಿಶೇಷ ಪೊಲೀಸ್ ತಂಡ ರಚಿಸಿ ಅವರನ್ನು ಪತ್ತೆಹಚ್ಚುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿದ್ದರೂ ಹಣ ಪಾವತಿಸುವಂತೆ ಯಾರಾದರೂ ಒತ್ತಡ ಹೇರಿದ್ದರೇ, ಅವರಿಗೆ ಯಾರಿಂದ ಕಿರುಕುಳ ಅಥವಾ ಒತ್ತಡವಿತ್ತು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಗಮನಹರಿಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಸದ್ಯ ಬೆಟಗೇರಿ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಫರ್ವೇಜ್ ಧಾರವಾಡ ಅವರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

