
ವಿಜಯಪುರ: ಚಡಚಣ: (ಸೆಪ್ಟೆಂಬರ್ 4, 2025): ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಭೀಮಾ ತೀರದ ರೌಡಿಸಂ ಮತ್ತೆ ಮುನ್ನಲೆಗೆ ಬಂದಿದ್ದು, ಕ್ಷೌರದ ಅಂಗಡಿಯಲ್ಲೇ ಗ್ರಾಪಂ ಮಾಜಿ ಅಧ್ಯಕ್ಷ ಭೀಮನಗೌಡ ಬಿರಾದಾರ (40) ಅವರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ಬುಧವಾರ ಬೆಳಿಗ್ಗೆ ನಡೆದಿದ್ದು, ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಗೆ ವೈಯಕ್ತಿಕ ದ್ವೇಷ, ಹಣಕಾಸಿನ ವಿವಾದ ಹಾಗೂ ರಾಜಕೀಯ ಎಂಬ ಸಂಶಾತ್ಮಕಬಕಾರಣಗಳು ಪ್ರಮುಖವಾಗಿವೆ ಎಂದು ಬಲ್ಲ ಮೂಲಗಳಿಂದ ತಿಳಿಸಿದ್ದಾರೆ.
ಘಟನೆ ವಿವರ:
ಬುಧವಾರ ಬೆಳಿಗ್ಗೆ ಸುಮಾರು 8:50ರ ಸುಮಾರಿಗೆ ದೇವರ ನಿಂಬರಗಿ ಗ್ರಾಮದ ಕ್ಷೌರದ ಅಂಗಡಿಯಲ್ಲಿ ಭೀಮನಗೌಡ ಬಿರಾದಾರ ಅವರು ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಈ ವೇಳೆ, ಏಕಾಏಕಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳ ತಂಡ ಭೀಮನಗೌಡ ಮತ್ತು ಕ್ಷೌರ ಮಾಡುತ್ತಿದ್ದ ವ್ಯಕ್ತಿಯ ಕಣ್ಣಿಗೆ ಖಾರದ ಪುಡಿ ಎರಚಿತ್ತು. ನಂತರ, ಭೀಮನಗೌಡನ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈ ಕೃತ್ಯ ನಡೆದ ನಂತರ ಸ್ಥಳದಲ್ಲಿದ್ದ ಜನರಿಗೂ ಪಿಸ್ತೂಲ್ ತೋರಿಸಿ ಬೆದರಿಸಿದ್ದು, ಈ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.
ನಾಲ್ವರು ಆರೋಪಿಗಳ ಬಂಧನ:
ಘಟನೆ ನಡೆದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಹತ್ಯೆಗೆ ಸಂಬಂಧಿಸಿದಂತೆ ಇದೇ ಗ್ರಾಮದ ವಸೀಮ್ ಮನಿಯಾರ, ರವುಲ್ಲಾ ಮಕಾನದಾರ, ಮೌಲಾಸಾಬ ಬೋರಗಿ ಹಾಗೂ ಫಿರೋಜ್ ಅವರಾದ ಎಂಬುವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರು ಕೃತ್ಯಕ್ಕೆ ನಾಡ ಪಿಸ್ತೂಲ್ ಬಳಸಿದ್ದು, ಕೊಲೆಯ ಹಿಂದಿನ ಸಂಪೂರ್ಣ ಕಾರಣ ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಹತ್ಯೆಗೆ ಸಂಶಯಾತ್ಮಕ ಕಾರಣಗಳು:
- ಹಣಕಾಸಿನ ವಿವಾದ: ವಿಚಾರಣೆ ವೇಳೆ ಒಬ್ಬ ಆರೋಪಿ, ಗ್ರಾಪಂ ಅಧ್ಯಕ್ಷರಾಗಿದ್ದಾಗ ಭೀಮನಗೌಡ ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ಹೇಳಿ ತನ್ನಿಂದ ಒಂದು ಲಕ್ಷ ರೂಪಾಯಿ ಪಡೆದಿದ್ದರು. ಆದರೆ, ಮನೆ ಅಥವಾ ಹಣ ಯಾವುದನ್ನೂ ಹಿಂತಿರುಗಿಸಿರಲಿಲ್ಲ ಎಂದು ತಿಳಿಸಿದ್ದಾನೆ.
- ರಾಜಕೀಯ ದ್ವೇಷ: ಭೀಮನಗೌಡ ಹಲವು ವರ್ಷಗಳಿಂದ ಗ್ರಾಪಂ ಮೇಲೆ ಹಿಡಿತ ಸಾಧಿಸಿದ್ದರು. ವಾರದ ಹಿಂದೆಯಷ್ಟೇ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಶೀಘ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಬೆಂಬಲಿತರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇತ್ತು. ಈ ರಾಜಕೀಯ ಕಾರಣದಿಂದಲೂ ಹತ್ಯೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
- ಹಿಂದಿನ ವೈರತ್ವ: ಇನ್ನೊಬ್ಬ ಆರೋಪಿಯ ಅಣ್ಣ 2023ರಲ್ಲಿ ಗ್ರಾಮದ ಪಿಡಿಒ ಅವರೊಂದಿಗೆ ಜಗಳವಾಡಿದ್ದ. ಈ ಪ್ರಕರಣದಲ್ಲಿ ಜಾತಿ ನಿಂದನೆ ಕೇಸ್ ದಾಖಲಾಗಿ ಆತ ಜೈಲಿಗೆ ಹೋಗಿ ಬಂದಿದ್ದ. ಈ ಪ್ರಕರಣದಲ್ಲಿ ಭೀಮನಗೌಡನ ಪಾತ್ರವಿದೆ ಎಂದು ಆತ ದ್ವೇಷ ಸಾಧಿಸಿದ್ದನು. ಎಂಬ ಸಂಶಯಾತ್ಮಕ ಕಾರಣಗಳಿವೆ.
ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ:
ಹತ್ಯೆಯ ನಂತರ ಮೃತದೇಹವನ್ನು ವಿಜಯಪುರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಮೃತದೇಹವನ್ನು ದೇವರ ನಿಂಬರಗಿ ಗ್ರಾಮಕ್ಕೆ ಕೊಂಡೊಯ್ದು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಚಡಚಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಹತ್ಯೆಗೀಡಾದ ಭೀಮನಗೌಡ ಕೂಡ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ಚಡಚಣ ಠಾಣೆಯ ರೌಡಿಶೀಟರ್ ದಾಖಲಾಗಿತ್ತು ಎಂದು ತಿಳಿದುಬಂದಿದೆ

