
ಆರೋಪಿ ಬಂಧನ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಮೆಚ್ಚುಗೆ
ಮಾಲೂರು, ಜು. 7: ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸುಮಾರು ₹50 ಸಾವಿರ ಮೌಲ್ಯದ 2 ಟನ್ ಅಕ್ಕಿ ಹಾಗೂ ಸಾಗಾಣಿಕೆಗೆ ಬಳಸಲಾಗುತ್ತಿದ್ದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕ ಸುಕ್ರಿವಾಲ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್ ಹಾಗೂ ಜಗದೀಶ್, ಡಿವೈಎಸ್ಪಿ ಕೃಷ್ಣಪ್ಪ ಅವರ ನಿರ್ದೇಶನದಂತೆ, ಮಾಲೂರು ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪ ಬಿ. ಗುತ್ತೇರ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಪೊಲೀಸ್ ಕಾನ್ಸ್ಟೇಬಲ್ ಅಶೋಕಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು. ನಂತರ ಪಿಎಸ್ಐ ಶಾಂತಮ್ಮ, ಹೆಡ್ ಕಾನ್ಸ್ಟೇಬಲ್ ರವಿಚಂದ್ರ ಹಾಗೂ ಕಾನ್ಸ್ಟೇಬಲ್ ಅಶೋಕಕುಮಾರ್ ಅವರ ತಂಡ ಜುಲೈ 7ರಂದು ದಾಳಿ ನಡೆಸಿ, ಹೊಸಕೋಟೆ ಪಟ್ಟಣದ ಗಾಣಿಗರಪೇಟೆ ನಿವಾಸಿ ಅಶೋಕ ಎಚ್.ಎಸ್. (36) ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಆರೋಪಿಯಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೆಎ-53-ಬಿ-4091 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನ ಹಾಗೂ ಅದರಲ್ಲಿದ್ದ ಸುಮಾರು ₹50 ಸಾವಿರ ಮೌಲ್ಯದ 2 ಟನ್ ಅಕ್ಕಿ ಮೂಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕ ಸುಕ್ರಿವಾಲ್ ಪ್ರಶಂಸಿಸಿದ್ದಾರೆ.

