ರಾಯಚೂರಿನಲ್ಲಿ ಕಟ್ಟಡದ ಚಾವಣಿ ಕುಸಿತ ದುರಂತ: ಮೂವರು ವಿದ್ಯಾರ್ಥಿಗಳ ದುರ್ಮರಣ, ಇಬ್ಬರಿಗೆ ಗಂಭೀರ ಗಾಯ

Spread the love

ರಾಯಚೂರು: ನಗರದ ಬಸ್ ನಿಲ್ದಾಣದ ಸಮೀಪದ ವಿಆರ್‌ಎಲ್ ಕಚೇರಿ ಬಳಿ ಇರುವ ಕಟ್ಟಡವೊಂದರ ಚಾವಣಿ ಭಾನುವಾರ ಏಕಾಏಕಿ ಕುಸಿದು ಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಘಟನೆಯಲ್ಲಿ ನಾಗರಾಜ್ ಕ್ಯಾದಿಗೇರಾ (21) ಹಾಗೂ ರವಿ ಕುಮಾರ ಸಮುದ್ರ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಅರ್ಜುನ್ ಕೋತಿಗುಡ್ಡ ಅವರನ್ನು ತಕ್ಷಣ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ. ಪ್ರಭು ಮಾತ್ರಳ್ಳಿ ಹಾಗೂ ಉಮೇಶ್ ಎಚ್.ಎನ್. ತಾಂಡಾ ಗಂಭೀರ ಗಾಯಗಳೊಂದಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ವಿದ್ಯಾರ್ಥಿಗಳಲ್ಲಿ ನಾಗರಾಜ್ ಕ್ಯಾದಿಗೇರಾ ಅವರು ‘ಅಂತ್ಯವಾಯ್ತು’ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದರೆಂದು ತಿಳಿದುಬಂದಿದೆ. ಘಟನೆಯ ದಿನ ವಿದ್ಯಾರ್ಥಿಗಳು ಕಟ್ಟಡದ ಮೇಲ್ಭಾಗದಲ್ಲಿದ್ದ ಶ್ರೀ ಗುರು ಫೋಟೋ ಸ್ಟುಡಿಯೋಗೆ ಕೆಲಸದ ನಿಮಿತ್ತ ತೆರಳಿದ್ದರು. ಭಾನುವಾರ ಸ್ಟುಡಿಯೋ ಮುಚ್ಚಿದ್ದರಿಂದ ಅಲ್ಲಿದ್ದವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಯತ್ನಿಸುತ್ತಿದ್ದ ವೇಳೆ ಚಾವಣಿ ಕುಸಿದು ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಜನರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಶಾಸಕಿ ಕರೆಮ್ಮ ಜಿ. ನಾಯಕ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾವಣಿ ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನಗರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *