
ಬೆಂಗಳೂರು: ರಾಜ್ಯದ 7 ವಿಧಾನ ಪರಿಷತ್ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದು ಭರ್ಜರಿ ಸಾಧನೆ ಮಾಡಿದ್ದು, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋಲು ಅನುಭವಿಸಿದ್ದಾರೆ. ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳಿಂದ ಒಟ್ಟು 11 ಶಾಸಕರು ಅಡ್ಡ ಮತದಾನ ಮಾಡಿರುವ ಮಾಹಿತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿತ್ತು. ಅದರ ಫಲವಾಗಿ ಪಕ್ಷದ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣ ಕಮಕನೂರು ಹಾಗೂ ಶಿವಣ್ಣ ಬಿ.ಎಸ್. ತಲಾ 30 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪಿ.ವಿ. ಮೋಹನ್ 29 ಮತಗಳನ್ನು ಪಡೆದರೆ, ವಿನಯ್ ಕಾರ್ತಿಕ್ 32 ಮತಗಳನ್ನು ಗಳಿಸಿ ವಿಜಯಶಾಲಿಯಾದರು.
ಬಿಜೆಪಿಯಿಂದ ಸ್ಪರ್ಧಿಸಿದ್ದ ರಘು ಕೌಟಿಲ್ಯ 29 ಮತಗಳು ಹಾಗೂ ಲಿಂಗರಾಜ ಪಾಟೀಲ 27 ಮತಗಳನ್ನು ಪಡೆದು ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಇತ್ತ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14 ಮತಗಳನ್ನು ಪಡೆದು ಸೋಲನ್ನು ಎದುರಿಸಿದರು. ಪಕ್ಷದ ಸಂಖ್ಯಾಬಲದ ಆಧಾರದ ಮೇಲೆ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದರೂ, ಶಾಸಕರನ್ನು ಒಗ್ಗೂಡಿಸುವ ಉದ್ದೇಶದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಈ ಹಿಂದೆಯೇ ಹೇಳಿದ್ದರು.
ಚುನಾವಣೆಯ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಿಂದ ಒಟ್ಟು 11 ಅಡ್ಡ ಮತಗಳು ಕಾಂಗ್ರೆಸ್ ಪರ ಚಲಾವಣೆಯಾಗಿರುವ ಮಾಹಿತಿ ಲಭ್ಯವಾಗಿದೆ. ಮೂಲಗಳ ಪ್ರಕಾರ ಬಿಜೆಪಿಯ 7 ಹಾಗೂ ಜೆಡಿಎಸ್ನ 4 ಶಾಸಕರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಒಬ್ಬ ಶಾಸಕರ ಮತ ಅಸಿಂಧುವಾಗಿದೆ ಎಂದು ತಿಳಿದುಬಂದಿದ್ದು,
ಈ ಫಲಿತಾಂಶದೊಂದಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಹತ್ವದ ರಾಜಕೀಯ ಗೆಲುವು ದೊರೆತಂತಾಗಿದೆ. ಹೈಕಮಾಂಡ್ ನೀಡಿದ್ದ ಮೊದಲ ದೊಡ್ಡ ಚುನಾವಣಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಅವರು, ಕಾಂಗ್ರೆಸ್ ಮತಗಳನ್ನು ಭದ್ರಪಡಿಸಿಕೊಳ್ಳುವುದರ ಜೊತೆಗೆ ಮೈತ್ರಿ ಪಕ್ಷಗಳ ಶಾಸಕರ ಬೆಂಬಲವನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಹೆಚ್ಚಿದ್ದು, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆಗೆ ಮತ್ತೊಮ್ಮೆ ಮನ್ನಣೆ ದೊರೆತಿದೆ.

