ಹುಬ್ಬಳ್ಳಿ: ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ವಿಸರ್ಜನೆ; ಕೇಸರಿ ಬಾವುಟಗಳಿಂದ ಕಂಗೊಳಿಸಿದ ನಗರ; ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿ.

Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಪ್ರಸಿದ್ಧ ರಾಣಿ ಚೆನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಯ ವಿಸರ್ಜನೆ ಸಮಾರಂಭವು ಮೂರನೇ ದಿನವಾದ ಶುಕ್ರವಾರ ಅದ್ಧೂರಿಯಾಗಿ ಜರುಗಿತು. ಈ ವರ್ಷ ಬಾಲಕೃಷ್ಣ ಅವತಾರದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದ್ದು, ವಿಸರ್ಜನೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕೇಸರಿ ಬಾವುಟಗಳ ವೈಭವ
ಗಣಪತಿ ಉತ್ಸವದ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯು ಕೇಸರಿ ಬಾವುಟಗಳಿಂದ ಕಂಗೊಳಿಸುತ್ತಿತ್ತು. ನಗರದ ಹೃದಯ ಭಾಗ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಿದ ನಂತರ ವಿನಾಯಕನ ವಿಸರ್ಜನೆ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಹುಬ್ಬಳ್ಳಿ ನಗರಕ್ಕೆ ಮತ್ತು ತಮಗೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು. ಈ ನಗರವು ತಮ್ಮ ವೃತ್ತಿಜೀವನಕ್ಕೆ ಉದ್ಯೋಗ ನೀಡಿ ಅನ್ನ ನೀಡಿದ ಹಾಗೂ ತಮ್ಮ ಪುಸ್ತಕಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಹೊಂದಿದೆ ಎಂದು ತಿಳಿಸಿದರು.

ಇದೇ ವೇಳೆ, ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿರುವುದನ್ನು ಉಲ್ಲೇಖಿಸಿ, ಅದೇ ಮಾದರಿಯಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿಯೂ ಭಾವುಟ ಹಾರಿಸಲು ನಡೆದ ಹೋರಾಟವನ್ನು ನೆನಪಿಸಿಕೊಂಡರು. ಈ ಮೈದಾನವು ಸರ್ಕಾರಿ ಮೈದಾನವಾಗಿದ್ದರೂ ಭಾರತೀಯ ಧ್ವಜ ಹಾರಿಸಲು ವಿರೋಧ ವ್ಯಕ್ತವಾಗಿತ್ತು ಎಂದು ಹೇಳಿದ ಅವರು, “ಭಾವುಟ ಹಾರಿಸಿಯೇ ತೀರುತ್ತೇವೆ” ಎಂದು ಹೋರಾಟಕ್ಕೆ ಇಳಿದ ಜನಸಂಘರ್ಷವನ್ನು ಶ್ಲಾಘಿಸಿದರು.
ಅನಂತಕುಮಾರ್ ಹೆಗಡೆ ಮತ್ತು ಯತ್ನಾಳ ಅವರಂತಹ ನಾಯಕರ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, “ಖಡಕ್ ರೊಟ್ಟಿ, ಖಾರ ಚಟ್ಟಿ ತಿನ್ನುವ ವ್ಯಕ್ತಿ ಯತ್ನಾಳ ಅವರನ್ನು ಕಟ್ಟಿ ಹಾಕಲು ಆಗಲ್ಲ” ಎಂದು ಹೇಳಿದರು. ಉಮಾಭಾರತಿಯವರು ತಮ್ಮ ಅಧಿಕಾರವನ್ನು ತ್ಯಜಿಸಿ ಧ್ವಜಾರೋಹಣಕ್ಕಾಗಿ ಬಂಧನಕ್ಕೊಳಗಾಗಿದ್ದರು ಎಂಬುದನ್ನೂ ಅವರು ಸ್ಮರಿಸಿದರು.

ಗಣೇಶೋತ್ಸವದ ಐತಿಹಾಸಿಕ ಹಿನ್ನೆಲೆ
ಗಣೇಶೋತ್ಸವವು ಹಿಂದೆ ಮನೆಗಳಿಗೆ ಮಾತ್ರ ಸೀಮಿತವಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸಲು ಶಿವಾಜಿ ಮಹಾರಾಜರಂತೆ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಪ್ರಾರಂಭಿಸಲಾಯಿತು. ಸಿಪಾಯಿ ದಂಗೆಯ ಸಮಯದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಣೇಶೋತ್ಸವವು ಕಿಚ್ಚು ಹಚ್ಚಿತ್ತು ಎಂದು ಅವರು ತಿಳಿಸಿದರು.

ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ವಾದ್ಯಮೇಳಗಳೊಂದಿಗೆ ಗಣಪತಿಯನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆಗೆ ಸಿದ್ಧಗೊಳಿಸಲಾಯಿತು. ಡಿಸಿಪಿ, ಎಸಿಪಿ ಮತ್ತು ಇನ್ಸ್‌ಪೆಕ್ಟರ್ ತಂಡಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಾಸಕ ಮಹೇಶ ತೆಂಗಿನಕಾಯಿ, ಸ್ವರ್ಣ ಗ್ರೂಪ್ ಮಾಲೀಕ ವಿ.ಎಸ್.ವಿ ಪ್ರಸಾದ್, ಸಂಜೀವ ಬಡಸ್ಕರ, ಸಂತೋಷ ಚವ್ಹಾಣ್ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.

Leave a Reply

Your email address will not be published. Required fields are marked *