ಶಿಂಧಿಕುರಬೇಟ ಗ್ರಾಪಂ ಸದಸ್ಯರಿಗೆ ಶಾಕ್: 26 ಜನರ ಸದಸ್ಯತ್ವ ರದ್ದು, ಆರು ವರ್ಷಗಳ ಚುನಾವಣೆಗೆ ನಿಷೇಧ!

Spread the love

ಬೆಳಗಾವಿ: ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯು ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದು ಸಾಬೀತಾದ ಹಿನ್ನೆಲೆ, ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿ 26 ಸದಸ್ಯರ ಸದಸ್ಯತ್ವವನ್ನು ತಕ್ಷಣದಿಂದಲೇ ರದ್ದುಗೊಳಿಸಿ, ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಡಕ್ ಆದೇಶ ಹೊರಡಿಸಿದೆ.
ಪಂಚಾಯತ್ ಆಡಳಿತದ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದು ಹೇಳಲಾಗುತ್ತಿದೆ.

ಗ್ರಾಪಂ ಸದಸ್ಯರ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ಇಲಾಖೆ ತಳೆದ ಕಠಿಣ ನಿಲುವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾದ ಗ್ರಾಪಂ ಆಡಳಿತ ಮಂಡಳಿ, ತಮ್ಮ ಸ್ವಾರ್ಥಕ್ಕಾಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಬಹಿರಂಗಗೊಂಡಿದೆ.

ಏನಿದು ಪ್ರಕರಣ?
2022ರ ಫೆಬ್ರವರಿ 25 ಮತ್ತು ಮಾರ್ಚ್ 25 ರಂದು ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ, ಗ್ರಾಮದ ಸರ್ವೆ ನಂ. 661ರ ಆಸ್ತಿಯನ್ನು ಶಾಂತಾ ನಾಗಪ್ಪ ಪೋತದಾರ ಅವರ ಹೆಸರಿನಲ್ಲಿದ್ದ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ, ನಿಯಮಬಾಹಿರವಾಗಿ ರಾಮಚಂದ್ರ ದಾನಪ್ಪ ಪೋತದಾರ ಅವರ ಹೆಸರಿಗೆ ವರ್ಗಾಯಿಸಿದ್ದು ಸಾಬೀತಾಗಿದೆ. ಈ ಬೋಗಸ್ ವರ್ಗಾವಣೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಕರ್ನಾಟಕ ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48 (4) ಮತ್ತು 48 (5)ರ ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಂಡಿದ್ದಾರೆ. ಈ ಆದೇಶದ ಅಡಿಯಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಪಾಟೀಲ, ಉಪಾಧ್ಯಕ್ಷ ಭೀಮಪ್ಪ ಬರನಾಳಿ, ಮತ್ತು ಇಪ್ಪತ್ನಾಲ್ಕು ಸದಸ್ಯರ ಸದಸ್ಯತ್ವ ಅನರ್ಹಗೊಂಡಿದೆ.

ಈ ಪ್ರಕರಣವು ಗ್ರಾಪಂ ಆಡಳಿತ ಮಂಡಳಿಗಳು ಜನಸೇವೆಯ ಹೆಸರಿನಲ್ಲಿ ಕಾನೂನು ಉಲ್ಲಂಘಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಇಲಾಖೆಯು ಇಂತಹ ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂಬುದನ್ನು ಇದು ಸ್ಪಷ್ಟಪಡಿಸಿದೆ. ಈ ಆದೇಶವು ಜನಸಾಮಾನ್ಯರಲ್ಲಿ ಪಂಚಾಯತ್ ವ್ಯವಸ್ಥೆಯ ಮೇಲೆ ವಿಶ್ವಾಸವನ್ನು ಮೂಡಿಸಿದ್ದು, ಪಂಚಾಯತ್ ಆಡಳಿತವು ಕಟ್ಟುನಿಟ್ಟಿನ ನಿಯಮಗಳಿಗೆ ಬದ್ಧವಾಗಿರಬೇಕು ಎಂಬುದಕ್ಕೆ ಇದು ಉದಾಹರಣೆಯಾಗಿದೆ.

Leave a Reply

Your email address will not be published. Required fields are marked *