

ವಡೋದರ (ಗುಜರಾತ್), ಆ.28 – ವಡೋದರ ನಗರದ ಸತ್ಯವಿಸ್ತಾರ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಗಣೇಶ ಚತುರ್ಥಿಯ ಮೆರವಣಿಗೆಯ ಸಂದರ್ಭದಲ್ಲಿ ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಮೊಟ್ಟೆ ಎಸೆದ ಹೀನ ಕೃತ್ಯದಿಂದ ನಗರದಲ್ಲಿ ತೀವ್ರ ಉದ್ವಿಗ್ನತೆ ನಿರ್ಮಾಣವಾಗಿದೆ. ಈ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಅಮಾನುಷ ಕೃತ್ಯವು ಭಕ್ತರಲ್ಲಿ ಆಕ್ರೋಶ ಉಂಟುಮಾಡಿದೆ.
ಪೊಲೀಸ್ ಆಯುಕ್ತ ನರಸಿಂಹ ಕೋಮರ್ ಅವರ ಆದೇಶದ ಮೇರೆಗೆ, ದುಷ್ಕರ್ಮಿಗಳನ್ನು ಪೊಲೀಸರು ತಕ್ಷಣವೇ ಬಂಧಿಸಿದರು. ಬಂಧಿತ ಆರೋಪಿಗಳಲ್ಲಿ ಸುಫಿಯಾನ್ ಅಲಿಯಾಸ್ ಗಾಮಾ ಸಲೀಂಬಾಯಿ ಮನ್ಸೂರಿ, ಶಹನವಾಜ್ ಅಲಿಯಾಸ್ ಬಾಬ್ಬಾದ್, ಮೊಹಮ್ಮದ್ ಇರ್ಷಾದ್ ಖುರೇಷಿ ಹಾಗೂ ಕಾನೂನು ಸಂಘರ್ಷದಲ್ಲಿ ಭಾಗಿಯಾಗಿರುವ ಅಪ್ರಾಪ್ತ ವಯಸ್ಕನನ್ನು ಸೇರಿಸಲಾಗಿದೆ.
ಬಂಧಿತರನ್ನು ಮೊಟ್ಟೆ ಎಸೆದ ಸ್ಥಳಕ್ಕೇ ಕರೆದೊಯ್ಯಲಾಯಿತು. ಅಲ್ಲಿಯೇ ಕೈಗಳನ್ನು ಕಟ್ಟಿ ನಿಲ್ಲಿಸಿ, ಮೊಣಕಾಲೂರಿಸಿ, ತಮ್ಮ ಕೃತ್ಯಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿಸುವಂತೆ ಮಾಡಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತು. ಸಾರ್ವಜನಿಕರ ಮುಂದೆಯೇ ಅವರು ಕ್ಷಮೆ ಯಾಚಿಸಿದರು. ಬಳಿಕ ಇವರನ್ನು ಊರಿನಲ್ಲಿ ಮೆರವಣಿಗೆ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಕೆಲವು ಮಟ್ಟಿಗೆ ಶಾಂತಿ ಮರಳಿದೆ.
ಘಟನೆಯ ಹಿನ್ನೆಲೆ, ಪೊಲೀಸರು ಗಸ್ತು ಬಿಗಿಗೊಳಿಸಿದ್ದು, ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಿದ್ದಾರೆ. ಸಮಾಜದಲ್ಲಿ ಭಯೋತ್ಪಾದನೆಯ ರೀತಿಯ ಇಂತಹ ಕೃತ್ಯಗಳಿಗೆ ಯಾವುದೇ ಸಹನೆ ಇರುವುದಿಲ್ಲವೆಂದು ಅಧಿಕಾರಿಗಳು ಕಠಿಣ ಸಂದೇಶ ನೀಡಿದ್ದಾರೆ.
ಪೋಲಿಸ್ ಇಲಾಖೆ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಲಾಗಿದ್ದು, ಕಾನೂನು ಪ್ರಕಾರ ಈ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

