
ಧಾರವಾಡ: ನಗರದ ಹೃದಯಭಾಗದಲ್ಲಿರುವ ಶ್ರೀನಗರ ಸರ್ಕಲ್ ಬಳಿ ಇರುವ ಕರ್ನಾಟಕ ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರ ತಂಡವೊಂದು ಪೊಲೀಸರ ಸಮಯಪ್ರಜ್ಞೆಯಿಂದಾಗಿ ವಿಫಲವಾಗಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕಳ್ಳರು ಬ್ಯಾಂಕಿನ ಶಟರ್ ಮುರಿಯುವ ಪ್ರಯತ್ನದಲ್ಲಿರುವಾಗಲೇ ಪೊಲೀಸರು ಸ್ಥಳಕ್ಕೆ ಬಂದಿದ್ದರಿಂದ ದರೋಡೆ ತಪ್ಪಿದೆ.
ಗಣೇಶ ಹಬ್ಬದ ಕಾರಣ ನಗರದಲ್ಲಿ ತಡರಾತ್ರಿಯವರೆಗೂ ಜನರ ಓಡಾಟ ಇತ್ತು. ಆದರೂ, ಕಳ್ಳರು ಈ ಕೃತ್ಯಕ್ಕೆ ಕೈ ಹಾಕಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳ್ಳತನದ ಯತ್ನದ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ಪೊಲೀಸರೇ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಬ್ಯಾಂಕ್ ಅಧಿಕಾರಿಗಳು, ಪರಿಶೀಲನೆ ನಡೆಸಿದ ನಂತರ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ, ಪೊಲೀಸರು ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪರಾರಿಯಾದ ಕಳ್ಳರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೀಟ್ ಪೊಲೀಸರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ನಗರದ ಬ್ಯಾಂಕ್‌ಗಳಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯವನ್ನು ತೋರಿಸಿದೆ.

