ಡೊನಾಲ್ಡ್ ಟ್ರಂಪ್ ಆರ್ಥಿಕ ನೀತಿ: ಬೆಂಗಳೂರಿನಲ್ಲಿ 20 ಲಕ್ಷ ಗಾರ್ಮೆಂಟ್ಸ್ ಕಾರ್ಮಿಕರ ಬದುಕು ಬೀದಿಗೆ ಬಿಳ್ಳುವ ಸಾಧ್ಯತೆ?

Spread the love

ಬೆಂಗಳೂರು: ನಾಡಿನ ಇತಿಹಾಸದ ಹೆಮ್ಮೆಯ ನಗರ ಬೆಂಗಳೂರು, ಲಕ್ಷಾಂತರ ಗಾರ್ಮೆಂಟ್ಸ್ ಕಾರ್ಮಿಕರಿಗೆ ಬದುಕು ನೀಡಿದೆ. ಇಡೀ ಕುಟುಂಬಗಳ ಹೊಟ್ಟೆ ತುಂಬಿಸುತ್ತಿರುವ ಈ ಉದ್ಯಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏಕಪಕ್ಷೀಯ ಮತ್ತು ಅಹಂಕಾರದ ಆರ್ಥಿಕ ನಿರ್ಧಾರದಿಂದಾಗಿ ಕರಿನೆರಳು ಆವರಿಸಿದೆ. (ಆ.27) ಜಾರಿಗೆ ಬಂದಿರುವ ಹೆಚ್ಚುವರಿ ಸುಂಕದ ಹೇರಿಕೆಯು, ರಾಜ್ಯದ ಸುಮಾರು 20 ಲಕ್ಷ ಕಾರ್ಮಿಕರನ್ನು ಬೀದಿಗೆ ತಳ್ಳುವ ಆತಂಕ ಸೃಷ್ಟಿಸಿದೆ.

ಸಾವಿರಾರು ಕಾರ್ಮಿಕರ ರಕ್ತ-ಬೆವರು ಹರಿಸುವ ಈ ಉದ್ಯಮದಲ್ಲಿ, ಒಬ್ಬ ಕಾರ್ಮಿಕನಿಗೆ ಸಿಗುವುದು ತಿಂಗಳಿಗೆ 12 ರಿಂದ 15 ಸಾವಿರ ರೂಪಾಯಿ. ಓವರ್ ಟೈಮ್ ಮಾಡಿದರೂ ಜೀವನ ನಿರ್ವಹಣೆಗೆ ಕಷ್ಟಪಡುವ ಇವರು, ಕೇವಲ ಒಬ್ಬ ವ್ಯಕ್ತಿಯ ಅಹಂಕಾರದ ನೀತಿಯಿಂದಾಗಿ ಭವಿಷ್ಯದ ಅನಿಶ್ಚಿತತೆಯಲ್ಲಿ ಸಿಲುಕಿದ್ದಾರೆ. ಇದು ಕೇವಲ ಒಂದು ಉದ್ಯಮದ ಸಮಸ್ಯೆಯಲ್ಲ, ಬದಲಾಗಿ ಲಕ್ಷಾಂತರ ಕುಟುಂಬಗಳ ಅಸ್ತಿತ್ವಕ್ಕೆ ಬಿದ್ದ ಪೆಟ್ಟಾಗಿದೆ.

ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ (FIEO) ಪ್ರಕಾರ, ಅಮೆರಿಕವು ಭಾರತದ ರಫ್ತು ವಸ್ತುಗಳ ಮೇಲೆ ಶೇಕಡಾ 25ರಷ್ಟು ಹೆಚ್ಚುವರಿ ಸುಂಕ ವಿಧಿಸಲು ನಿರ್ಧರಿಸಿದೆ. ಇದರ ಪರಿಣಾಮವಾಗಿ ಭಾರತದ ಮೇಲೆ ಒಟ್ಟು ಶೇಕಡಾ 50ರಷ್ಟು ತೆರಿಗೆ ಹೇರಿಕೆ ಆಗಲಿದೆ. ಈ ಏಕಪಕ್ಷೀಯ ನಿರ್ಧಾರದಿಂದಾಗಿ ಈಗಾಗಲೇ ತಿರುಪುರ್, ನೊಯ್ದಾ, ಮತ್ತು ಸುರತ್‌ನಂತಹ ಪ್ರಮುಖ ಗಾರ್ಮೆಂಟ್ಸ್ ಕೇಂದ್ರಗಳು ಸ್ಪರ್ಧಾತ್ಮಕತೆಯನ್ನು ಕಳೆದುಕೊಂಡು ಉತ್ಪಾದನೆ ಸ್ಥಗಿತಗೊಳಿಸಿವೆ.

ಇದೇ ಪರಿಸ್ಥಿತಿ ಈಗ ಬೆಂಗಳೂರು ಮತ್ತು ಕರ್ನಾಟಕದ ಗಾರ್ಮೆಂಟ್ಸ್ ಕಾರ್ಖಾನೆಗಳಿಗೂ ಎದುರಾಗಿದೆ.
ಒಬ್ಬ ವ್ಯಕ್ತಿಯ ದುರಹಂಕಾರದ ರಾಜಕೀಯಕ್ಕೆ ಅಮಾಯಕ ಕಾರ್ಮಿಕರು ಬಲಿಪಶುಗಳಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ರಂಪ್ ಅವರ ನಿರ್ಧಾರವು ಜಾಗತಿಕವಾಗಿ ವ್ಯಾಪಕ ಬೇಸರಕ್ಕೆ ಕಾರಣವಾಗಿದೆ. ಈ ಅನಿರೀಕ್ಷಿತ ಆಘಾತಕ್ಕೆ ಬಲಿಯಾಗುತ್ತಿರುವ ಕಾರ್ಮಿಕರ ಪಾಡು ಹೇಳತೀರದಾಗಿದೆ.

ಈ ನಿರ್ಧಾರವನ್ನು ಟ್ರಂಪ್ ಪುನರ್ಪರಿಶೀಲಿಸುತ್ತಾರೆಯೇ? ಅಥವಾ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದು ಬದುಕು ಕಳೆದುಕೊಳ್ಳಬೇಕೇ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಇಲ್ಲ. ಒಟ್ಟಿನಲ್ಲಿ, ಗಾರ್ಮೆಂಟ್ಸ್ ಕಾರ್ಮಿಕರ ಕಣ್ಣಲ್ಲಿ ಈಗ ಭಯ ಮತ್ತು ಅನಿಶ್ಚಿತತೆಯ ಕರಿನೆರಳು ಆವರಿಸಿದೆ.

Leave a Reply

Your email address will not be published. Required fields are marked *