
ಧಾರವಾಡ: ನಿರುದ್ಯೋಗವು ಕೇವಲ ಕರ್ನಾಟಕಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಇದು ಬಹಳ ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಯುವಕರಿಗೆ ಸಿಗಬೇಕಾದ ಕೆಲಸಗಳು ಸಿಗುತ್ತಿಲ್ಲ. ಈ ವಿಷಯವನ್ನು ಅಧಿಕಾರದಲ್ಲಿ ಇರುವವರು ಗಮನಕ್ಕೆ ತೆಗೆದುಕೊಂಡು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಯುವಕರ ಪರಿಸ್ಥಿತಿಗೆ ಸ್ಪಂದಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗಡೆ ಅವರು ಒತ್ತಾಯಿಸಿದರು.
ಶುಕ್ರವಾರದಂದು ಧಾರವಾಡಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ಕುರಿತು ಹೋರಾಟ ಮಾಡುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಭ್ರಷ್ಟಾಚಾರದಿಂದ ಜನರಿಗೆ ನೋವು:
ಉದ್ಯೋಗ ಸೃಷ್ಟಿ ಮಾಡುವಾಗ ಮತ್ತು ಹುದ್ದೆಗಳನ್ನು ಭರ್ತಿ ಮಾಡುವಾಗ ಆಡಳಿತದಲ್ಲಿ ಸರಿಯಾದ ದಾರಿ ಇರಬೇಕು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಅಥವಾ ಅಕ್ರಮಗಳು ಇರಬಾರದು. ಇದರಿಂದ ಜನರಿಗೆ ನೋವಾಗುತ್ತದೆ, ಜನರ ನೋವು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ಹೆಗಡೆ ಎಚ್ಚರಿಸಿದರು.
ಆರ್.ಎಸ್.ಎಸ್. ನಿಷೇಧ ಸಂವಿಧಾನ ವಿರೋಧಿ:
ರಾಜ್ಯದಲ್ಲಿ ಆರ್.ಎಸ್.ಎಸ್. (RSS) ಸಂಘಟನೆಯನ್ನು ನಿಷೇಧಿಸುವ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಘಟನೆ ಕಟ್ಟುವ ಅಧಿಕಾರ ಸಂವಿಧಾನದಲ್ಲಿಯೇ ಇದೆ. ಆದ್ದರಿಂದ, ಸಂವಿಧಾನ ನೀಡಿರುವ ಹಕ್ಕನ್ನು ಪ್ರಶ್ನಿಸಿ ಸಂಘಟನೆಗಳನ್ನು ನಿಷೇಧಿಸುವುದು ನನ್ನ ಅನಿಸಿಕೆಯಲ್ಲಿ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಅಭಿಪ್ರಾಯಪಟ್ಟರು.
“ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ನ್ನೇ ಬ್ಯಾನ್ ಮಾಡ್ತಾರೆ. ಅದು ಅವರ ಆಟ. ಆದರೆ, ಸಂವಿಧಾನ ಇರುವಾಗ ಬ್ಯಾನ್ ಮಾಡುವುದು ಸರಿಯಲ್ಲ” ಎಂದು ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು. ಈ ಸಮಸ್ಯೆಗಳ ಕುರಿತು ಒಂದು ಹೋರಾಟದ ಸಿದ್ಧತೆಯಲ್ಲಿ ಪ್ರಯತ್ನ ಮಾಡುತ್ತಿರುವುದಾಗಿ ಅವರು ನುಡಿದರು.

