ಎಸ್.ಟಿ. ಮಾನ್ಯತೆಗಾಗಿ ಸಿಎಂ ಸಿದ್ದರಾಮಯ್ಯಗೆ ಕುರುಬ ಸಮುದಾಯದ ಸಮಿತಿ ಒತ್ತಾಯ; ಡಿಸೆಂಬರ್‌ನಲ್ಲಿ ‘ದೆಹಲಿ ಚಲೋ’ಗೆ ನಿರ್ಧಾರ

Spread the love

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್.ಟಿ.) ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಕೇಳಿರುವ ಕುಲಶಾಸ್ತ್ರ ಅಧ್ಯಯನ (Ethnographic Survey) ಮಾಹಿತಿ ಹಾಗೂ ಇತರ ದಾಖಲೆಗಳನ್ನು ಕೂಡಲೇ ರವಾನಿಸುವಂತೆ ಕರ್ನಾಟಕ ಪ್ರದೇಶ ಕುರುಬ ಸಮಾಜದ ಸಮಿತಿ ಮತ್ತು ಎಸ್.ಟಿ. ಹೋರಾಟ ಸಮಿತಿ ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ತೀವ್ರ ಒತ್ತಡ ಹೇರಿವೆ. ಕೇಂದ್ರವು ಮಾಹಿತಿ ಕೇಳಿ ಏಳು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಅಗತ್ಯ ದಾಖಲೆಗಳನ್ನು ಒದಗಿಸದೇ ಇರುವುದಕ್ಕೆ ಸಮಿತಿ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.

ಸಮಿತಿಯ ಅಧ್ಯಕ್ಷರಾದ ಸಿದ್ದನ್ನಾ ತೇಜಿ ಅವರ ನೇತೃತ್ವದಲ್ಲಿ ಶುಕ್ರವಾರ ನಗರದ ಶಾಸಕರ ಭವನದಲ್ಲಿ ನಡೆದ ಸಭೆಯಲ್ಲಿ ಈ ಸಂಬಂಧ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಲಾಯಿತು.

ರಾಜ್ಯ ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ, ಮುಂಬರುವ ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ, ರಾಜ್ಯದ 30 ಜಿಲ್ಲೆಗಳಿಂದ ಸುಮಾರು 20 ರಿಂದ 25 ಸಾವಿರ ಜನರನ್ನು ಒಗ್ಗೂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ‘ದೆಹಲಿ ಚಲೋ’ ಹೋರಾಟ ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗಿದೆ.

ಸಭೆ ನಡೆಯುತ್ತಿದ್ದಾಗಲೇ ಹೋರಾಟಗಾರರು ಮತ್ತು ಪದಾಧಿಕಾರಿಗಳನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಕರೆ ಬಂದಿತು. ತಕ್ಷಣವೇ ಸಮಿತಿಯ ನಿಯೋಗವು ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಕೇಂದ್ರಕ್ಕೆ ಮಾಹಿತಿ ಕಳುಹಿಸುವ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿತು.

ಈ ಮಹತ್ವದ ಸಭೆಯಲ್ಲಿ 30 ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಹೋರಾಟಗಾರರು ಪಾಲ್ಗೊಂಡಿದ್ದರು. ಸಮಿತಿಯ ಅಧ್ಯಕ್ಷರಾದ ಸಿದ್ದನ್ನಾ ತೇಜಿ, ಟಿವಿ ಬೆಳಗಾವಿ ಸಂಚಾಲಕರು, ಬಿಬಿಎಂಪಿ ಸದಸ್ಯ ಸೋಮಶೇಖರ್, ರಾಜಕುಮಾರ್ ಮಾಳಿಂಗರಾಯ, ಅಪ್ಪಾಜಿ, ಸಂತೋಷ್ ಪೂಜಾರಿ ಮತ್ತು ಸಮಿತಿಯ ಕಾರ್ಯದರ್ಶಿ ರವಿರಾಜ್ ಕಂಬಳಿ ಸೇರಿದಂತೆ ಹಲವು ಪ್ರಮುಖ ಪದಾಧಿಕಾರಿಗಳು ಹಾಜರಿದ್ದರು. ಬಹುದಿನಗಳ ಬೇಡಿಕೆಯಾದ ಎಸ್.ಟಿ. ಮೀಸಲಾತಿಗಾಗಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.

Leave a Reply

Your email address will not be published. Required fields are marked *