ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಲಾಪ್ರತಿಭೋತ್ಸವ ಕಾರ್ಯಕ್ರಮ – ಅಭ್ಯರ್ಥಿಗಳ ನೋಂದಣಿಗೆ ನವೆಂಬರ್ 18 ಕೊನೆಯ ದಿನ

Spread the love

ಧಾರವಾಡ ನ.05: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತೇಜನ ನೀಡುವ ಮತ್ತು ತಮ್ಮ ಕಲಾನೈಪುಣ್ಯತೆಯನ್ನು ವೃದ್ಧಿಗೊಳಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಕಲಾಪ್ರತಿಭೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸುವರ್ಣ ಸಾಂಸ್ಕೃತಿಕ ಸಮುಚ್ಛಯ, ಕಾಲೇಜು ರಸ್ತೆ, ಧಾರವಾಡ–580001 (ದೂರವಾಣಿ: 0836-2442909) ಗೆ ಅಂಚೆ ಮೂಲಕ ಅಥವಾ ಖುದ್ದಾಗಿ ನವೆಂಬರ್ 18, 2025ರೊಳಗೆ ಸಲ್ಲಿಸಬೇಕು ಎಂದು ಇಲಾಖೆಯು ತಿಳಿಸಿದೆ.

ವಯೋಮಿತಿ:

  • ಬಾಲ ಪ್ರತಿಭೆ ಸ್ಪರ್ಧೆಗಳಿಗೆ: ಅಭ್ಯರ್ಥಿಗಳು ಕನಿಷ್ಠ 8 ವರ್ಷ ತುಂಬಿರಬೇಕು ಮತ್ತು 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
  • ಕಿಶೋರ ಪ್ರತಿಭೆ ಸ್ಪರ್ಧೆಗಳಿಗೆ: ಕನಿಷ್ಠ 14 ವರ್ಷ ತುಂಬಿರಬೇಕು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
  • ಯುವ ಪ್ರತಿಭೆ ಸ್ಪರ್ಧೆಗಳಿಗೆ: ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಶಾಲೆಯಿಂದ ಪಡೆದ ವಯೋ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ಶಾಲೆಯಿಂದ ಬಾರದ ಅಭ್ಯರ್ಥಿಗಳು ತಮ್ಮ ವಯಸ್ಸು ದೃಢೀಕರಿಸಲು ಪಂಚಾಯ್ತಿ, ನಗರಸಭೆ, ಪುರಸಭೆ ಅಥವಾ ಪಾಲಿಕೆ ಕಚೇರಿಯಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು.

ಏಕವ್ಯಕ್ತಿ ಸ್ಪರ್ಧೆಗಳ ವಿಭಾಗಗಳು ಮತ್ತು ಸಮಯ:
ಬಾಲ ಪ್ರತಿಭೆ ಮತ್ತು ಕಿಶೋರ ಪ್ರತಿಭೆ ವಿಭಾಗಗಳಿಗೆ ನಿಗದಿಪಡಿಸಿದ ಕಲಾಪ್ರಕಾರಗಳು ಮತ್ತು ಅವುಗಳ ಸಮಯ:

  • ಶಾಸ್ತ್ರೀಯ ನೃತ್ಯ – 10 ನಿಮಿಷ
  • ಸುಗಮ ಸಂಗೀತ – 7 ನಿಮಿಷ
  • ಚಿತ್ರಕಲೆ – 120 ನಿಮಿಷ
  • ಜಾನಪದ ಗೀತೆ – 7 ನಿಮಿಷ
  • ಹಿಂದೂಸ್ತಾನಿ ಅಥವಾ ಕರ್ನಾಟಕ ವಾದ್ಯ ಸಂಗೀತ – 7 ನಿಮಿಷ
  • ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಗಾಯನ – 7 ನಿಮಿಷ

ಯುವ ಪ್ರತಿಭೆ ವಿಭಾಗಕ್ಕೆ ನಿಗದಿಪಡಿಸಿದ ಕಲಾಪ್ರಕಾರಗಳು ಮತ್ತು ಅವುಗಳ ಸಮಯ:

  • ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ) – 7 ನಿಮಿಷ
  • ಶಾಸ್ತ್ರೀಯ ನೃತ್ಯ – 10 ನಿಮಿಷ
  • ಸುಗಮ ಸಂಗೀತ – 7 ನಿಮಿಷ
  • ಶಾಸ್ತ್ರೀಯ ಸಂಗೀತ (ಹಿಂದೂಸ್ತಾನಿ/ಕರ್ನಾಟಕ) – 7 ನಿಮಿಷ
  • ಚಿತ್ರಕಲೆ – 120 ನಿಮಿಷ
  • ವಾದ್ಯ ಸಂಗೀತ (ಹಿಂದೂಸ್ತಾನಿ/ಕರ್ನಾಟಕ) – 7 ನಿಮಿಷ

ಸಮೂಹ ಸ್ಪರ್ಧೆಗಳು:
ಯುವ ಪ್ರತಿಭೆಗಳ ಸಮೂಹ ಸ್ಪರ್ಧೆಯು ನಾಟಕ ವಿಭಾಗದಲ್ಲಿದ್ದು, ನಾಟಕದ ಅವಧಿ 45 ನಿಮಿಷ. ಪ್ರತಿ ತಂಡದಲ್ಲಿ ಕನಿಷ್ಠ 10 ಮಂದಿ ಮತ್ತು ಗರಿಷ್ಠ 15 ಮಂದಿ ಸದಸ್ಯರಿರಬೇಕು.

ಬಹುಮಾನಗಳು ಮತ್ತು ಪ್ರಮಾಣ ಪತ್ರಗಳು:
ಜಿಲ್ಲಾ ಮಟ್ಟದಲ್ಲಿ ನಡೆಯುವ ಬಾಲ, ಕಿಶೋರ ಮತ್ತು ಯುವ ಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಜಿಲ್ಲಾ ಹಾಗೂ ಬೆಳಗಾವಿ ವಲಯ ಮಟ್ಟದ ಸ್ಪರ್ಧೆಗಳಿಗೆ ಯಾವುದೇ ನಗದು ಬಹುಮಾನ ಇರುವುದಿಲ್ಲ.

ಆದರೆ ರಾಜ್ಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ಕ್ರಮವಾಗಿ ರೂ. 15,000, ರೂ. 10,000, ಮತ್ತು ರೂ. 7,500 ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ.

ಸಮೂಹ ವಿಭಾಗದಲ್ಲಿ ಭಾಗವಹಿಸುವ ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಮತ್ತು ಗರಿಷ್ಠ 15 ಜನರನ್ನು ಮೀರಿರಬಾರದು. ಬೆಳಗಾವಿ ವಲಯ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಗಮಿಸುವ ನಾಟಕ ನಿರ್ದೇಶಕರು, ಪಕ್ಕವಾದ್ಯಗಾರರು ಮತ್ತು ಸಹ ಕಲಾವಿದರಿಗೆ ವಾಸ್ತವಿಕ ಪ್ರಯಾಣ ವೆಚ್ಚ, ಊಟ, ವಸತಿ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.

ರಾಜ್ಯ ಮಟ್ಟದ ಸಮೂಹ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ ರೂ. 50,000, ರೂ. 40,000, ಹಾಗೂ ರೂ. 30,000 ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *