
ನವಲಗುಂದ: ಈ ಭಾಗದ ರೈತರ ಪ್ರಮುಖ ಹಿಂಗಾರು ಬೆಳೆಗಳಾದ ಸೂರ್ಯಕಾಂತಿ ಮತ್ತು ಗೋಧಿ ಸದ್ಯ ಕಾಳು ಕಟ್ಟುವ ಹಂತದಲ್ಲಿದ್ದು, ಬೆಳೆಗಳ ರಕ್ಷಣೆಗಾಗಿ ಮಲಪ್ರಭಾ ಕಾಲುವೆಯ ನೀರು ಬಿಡುಗಡೆ ಅವಧಿಯನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸಬೇಕೆಂದು ಬಿಜೆಪಿ ಮುಖಂಡ ದೇವರಾಜ ದಾಡಿಬಾವಿ ಸರ್ಕಾರ ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪ್ರಸ್ತುತ ಬೇಸಿಗೆಯ ತಾಪಮಾನ ಏರುತ್ತಿರುವುದರಿಂದ ಮತ್ತು ಮಳೆಯ ಯಾವುದೇ ಆಶ್ರಯ ಇಲ್ಲದ ಕಾರಣ, ರೈತರು ಸಂಪೂರ್ಣವಾಗಿ ಕಾಲುವೆ ನೀರನ್ನೇ ನಂಬಿದ್ದಾರೆ. ಆದರೆ, ಅಧಿಕಾರಿಗಳು ಫೆಬ್ರವರಿ 15ರವರೆಗೆ ಮಾತ್ರ ಕಾಲುವೆಗೆ ನೀರು ಬಿಡುವುದಾಗಿ ತಿಳಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಬೆಳೆಗಳಿಗೆ ಈ ಸಮಯದಲ್ಲಿ ನೀರಿನ ಅಗತ್ಯವಿದ್ದು, ಅವಧಿ ಮುಕ್ತಾಯವಾಗುವ ಭೀತಿಯಲ್ಲಿ ರೈತರು ಹಗಲಿರುಳು ಜಮೀನಿನಲ್ಲಿ ನೀರು ಹಾಯಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಬೆಳೆ ಕೈಗೆ ಸಿಗದೆ ಸಂಕಷ್ಟಕ್ಕೀಡಾಗಿರುವ ರೈತರು, ಈಗ ಹಿಂಗಾರಿಯ ಸೂರ್ಯಕಾಂತಿ, ಗೋಧಿ ಹಾಗೂ ಕಡಲೆ ಬೆಳೆಗಳ ಮೇಲೆ ಹೆಚ್ಚಿನ ಆಸೆ ಇಟ್ಟುಕೊಂಡಿದ್ದಾರೆ. ಒಂದು ವೇಳೆ ನೀರು ಸ್ಥಗಿತಗೊಂಡರೆ ಬೆಳೆಗಳು ಒಣಗಿ ಹೋಗುವ ಸಂಭವವಿದ್ದು, ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ 15 ದಿನಗಳವರೆಗೆ ಕಾಲುವೆ ನೀರು ಬಿಡುಗಡೆಯ ಅವಧಿಯನ್ನು ವಿಸ್ತರಿಸಬೇಕು. ಆ ಮೂಲಕ ಭೂಮಿಯಲ್ಲಿರುವ ಬೆಳೆಗಳಿಗೆ ಸರಿಯಾಗಿ ನೀರೂಣಿಸಲು ಅನುವು ಮಾಡಿಕೊಡಬೇಕೆಂದು ದೇವರಾಜ ದಾಡಿಬಾವಿ ತಮ್ಮ ಪ್ರಕಟಣೆಯಲ್ಲಿ ಪ್ರಬಲವಾಗಿ ಆಗ್ರಹಿಸಿದ್ದಾರೆ.

