
ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ಕುಟುಂಬಕ್ಕೆ ಆಘಾತ; ನಾಲ್ವರು ನಾಪತ್ತೆ, ಓರ್ವ ಮಹಿಳೆ ಸ್ಥಿತಿ ಗಂಭೀರ
ಬೆಳಗಾವಿ: ದಸರಾ ರಜೆಗಾಗಿ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಸೀರೋಡಾ ಸಮುದ್ರ ತೀರಕ್ಕೆ ಪ್ರವಾಸಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಒಂದೇ ಕುಟುಂಬದ ಮೂವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ. ಈ ದುರಂತದಿಂದ ಲೋಂಡಾ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ.
ಮೂವರು ಬಾಲಕರು ಸಾವು, ಓರ್ವ ಮಹಿಳೆ ಗಂಭೀರ
ದುರಂತದಲ್ಲಿ ಮೃತರಾದವರನ್ನು ಖಾನಾಪುರ ತಾಲೂಕಿನ ಲೋಂಡಾ ಗ್ರಾಮದ ನಿವಾಸಿಗಳಾದ ಇಸ್ರಾರ್ ಕಿತ್ತೂರ (17), ಇಬಾದ್ ಕಿತ್ತೂರ (13) ಮತ್ತು ಅಳ್ಳಾವರ ಮೂಲದ ನಮೀರಾ ಅಕ್ತರ್ (16) ಎಂದು ಗುರುತಿಸಲಾಗಿದೆ.
ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರಹಾನಾ ಕಿತ್ತೂರ (34) ಎಂಬ ಮಹಿಳೆಯನ್ನು ನೀರಿನೆಡೆಯಿಂದ ಹೊರತೆಗೆಯಲಾಗಿದ್ದು, ಅವರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ವರು ನಾಪತ್ತೆ, ಶೋಧ ಕಾರ್ಯ ಚುರುಕು
ಸಮುದ್ರದಲ್ಲಿ ಕಣ್ಮರೆಯಾಗಿರುವವರ ಪೈಕಿ ಇರ್ಫಾನ್ ಕಿತ್ತೂರ (36), ಇಕ್ವಾನ್ ಕಿತ್ತೂರ (15) ಹಾಗೂ ಮಹಾರಾಷ್ಟ್ರ ಮೂಲದ ಪರಯಾನ್ ಮನಿಯರ್ (20) ಮತ್ತು ಜಾಕಿರ್ ಮನಿಯರ್ (13) ಸೇರಿದ್ದಾರೆ.
ಈ ನಾಲ್ವರಿಗಾಗಿ ಸ್ಥಳೀಯ ಪೊಲೀಸ್ ಮತ್ತು ರಕ್ಷಣಾ ತಂಡಗಳು ಸಮುದ್ರ ತೀರದಲ್ಲಿ ತೀವ್ರ ಹುಡುಕಾಟ ನಡೆಸುತ್ತಿವೆ. ಪ್ರವಾಸಕ್ಕೆ ತೆರಳಿದ್ದ ಒಂದೇ ಕುಟುಂಬದ ಹಲವರು ಸಮುದ್ರ ಪಾಲಾಗಿರುವುದು ಲೋಂಡಾ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

