
5 ಗ್ರಾಂ ಚಿನ್ನದ ಉಂಗುರದ ವಿಚಾರಕ್ಕೆ ದಂಪತಿ ಆತ್ಮಹತ್ಯೆ; ಅನಾಥವಾದ ಎರಡು ಕಂದಮ್ಮಗಳು!
ಬಾಗಲಕೋಟೆ: ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ತಾಳ್ಮೆ ಕಳೆದುಕೊಂಡಾಗ ಎಂತಹ ದುರಂತಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಕೇವಲ 5 ಗ್ರಾಂ ತೂಕದ ಚಿನ್ನದ ಉಂಗುರ ಕಾಣೆಯಾದ ವಿಚಾರವಾಗಿ ಮನೆಯಲ್ಲಿ ಉಂಟಾಗಿದ್ದ ಕಲಹ, ಕೊನೆಗೆ ದಂಪತಿಯ ಸಾವಿನಲ್ಲಿ ಅಂತ್ಯಗೊಂಡಿದ್ದು, ನಾಲ್ಕು ವರ್ಷದ ಹಾಗೂ 16 ತಿಂಗಳ ಎರಡು ಪುಟ್ಟ ಮಕ್ಕಳು ಅಪ್ಪ-ಅಮ್ಮನನ್ನು ಕಳೆದುಕೊಂಡು ಅನಾಥವಾಗಿವೆ.
ಎಂಟು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಪ್ಪಾಶಿ ಮತ್ತು ರಾಜೇಶ್ವರಿ, ಅವಿಭಕ್ತ ಕುಟುಂಬದಲ್ಲಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಇವರ ಸುಂದರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಮಕ್ಕಳೂ ಇದ್ದರು. ಆದರೆ, ಆರು ತಿಂಗಳ ಹಿಂದೆ ರಾಜೇಶ್ವರಿಯ 5 ಗ್ರಾಂ ತೂಕದ ಚಿನ್ನದ ಉಂಗುರ ಕಾಣೆಯಾಗಿದ್ದು, ಕುಟುಂಬದ ನೆಮ್ಮದಿಗೆ ಭಂಗ ತಂದಿತ್ತು. ಉಂಗುರ ಕಳೆದುಹೋದ ವಿಚಾರವಾಗಿ ಮನೆಯಲ್ಲಿ ಆಗಾಗ ಅಸಮಾಧಾನ ಉಂಟಾಗುತ್ತಿತ್ತು. ರಾಜೇಶ್ವರಿ ಮನೆಯವರ ಮೇಲೆಯೇ ಅನುಮಾನ ವ್ಯಕ್ತಪಡಿಸುತ್ತಿದ್ದರಿಂದ ಕುಟುಂಬದಲ್ಲಿ ಮನಸ್ತಾಪ ಹೆಚ್ಚಾಗಿತ್ತು.
ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದ ಅತ್ತೆ, ಕಳೆದುಹೋದ ಉಂಗುರದ ಬಗ್ಗೆ ಚಿಂತಿಸಬೇಡ, ನಾನೇ ಹೊಸ ಉಂಗುರ ಮಾಡಿಸಿಕೊಡುತ್ತೇನೆ ಎಂದು ಸೊಸೆಯನ್ನು ಸಮಾಧಾನಪಡಿಸಿದ್ದರು. ಆದರೂ, ಮನಸ್ಸಿನಲ್ಲಿದ್ದ ಅನುಮಾನ ಮತ್ತು ಬೇಸರ ಮಾತ್ರ ದೂರವಾಗಿರಲಿಲ್ಲ. ಇದೇ ವಿಚಾರವಾಗಿ ಪತಿ-ಪತ್ನಿಯ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು.
ಮೊನ್ನೆ ರಾತ್ರಿ ಕೂಡ ಉಂಗುರದ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಮನೆಯ ಹಿರಿಯರು ಮಧ್ಯಪ್ರವೇಶಿಸಿ ಇಬ್ಬರಿಗೂ ಬುದ್ಧಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ, ನಿರಂತರ ಕಲಹದಿಂದ ಮನನೊಂದಿದ್ದ ಅಪ್ಪಾಶಿ, ಮನೆಯವರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ನಸುಕಿನ ಜಾವ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಪತಿಯನ್ನು ಹುಡುಕುತ್ತಾ ಕೊಟ್ಟಿಗೆಯತ್ತ ತೆರಳಿದ ರಾಜೇಶ್ವರಿಗೆ ಪತಿಯ ಶವ ಕಂಡು ಆಘಾತವಾಗಿದೆ. ಗಂಡನ ಸಾವಿನಿಂದ ತೀವ್ರವಾಗಿ ಮನನೊಂದಿದ್ದ ರಾಜೇಶ್ವರಿ, ಮನೆಯವರೆಲ್ಲರೂ ದುಃಖದಲ್ಲಿ ಮುಳುಗಿದ್ದ ಸಂದರ್ಭದಲ್ಲಿ ತನ್ನ ಕೋಣೆಗೆ ತೆರಳಿದ್ದಾರೆ. ಬಳಿಕ, ತನ್ನ 16 ತಿಂಗಳ ಮಗುವಿಗಾಗಿ ಕಟ್ಟಿದ್ದ ಜೋಳಿಗೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅಪ್ಪ-ಅಮ್ಮನನ್ನು ಕಳೆದುಕೊಂಡ ಮುಗ್ಧ ಮಕ್ಕಳು
ಒಂದು ಚಿಕ್ಕ ಸಮಸ್ಯೆಯನ್ನು ಪರಸ್ಪರ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ, ಕ್ಷಣಿಕ ಕೋಪ ಮತ್ತು ದುಡುಕಿನ ನಿರ್ಧಾರದಿಂದ ಎರಡು ಜೀವಗಳು ಬಲಿಯಾಗಿದ್ದು, ನಾಲ್ಕು ವರ್ಷದ ಹಾಗೂ 16 ತಿಂಗಳ ಎರಡು ಪುಟ್ಟ ಮಕ್ಕಳು ಅಪ್ಪ-ಅಮ್ಮನ ಪ್ರೀತಿಯಿಂದ ವಂಚಿತರಾಗಿವೆ. ಏನೂ ಅರಿಯದ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಪರಿಸ್ಥಿತಿ ಮನಕಲಕುವಂತಿದೆ.
ವಸ್ತುಗಳು ಕಳೆದುಹೋದರೆ ಮತ್ತೆ ಸಂಪಾದಿಸಬಹುದು. ಆದರೆ, ಕಳೆದುಕೊಂಡ ಜೀವವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಸಣ್ಣಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಂಡು ದುಡುಕಿನ ನಿರ್ಧಾರ ಕೈಗೊಳ್ಳುವ ಮುನ್ನ, ನಮ್ಮನ್ನೇ ನಂಬಿರುವ ಕುಟುಂಬದವರು ಹಾಗೂ ಮಕ್ಕಳ ಭವಿಷ್ಯವನ್ನು ನೆನೆಯುವುದು ಅತ್ಯಗತ್ಯ. ಕೋಪಕ್ಕಿಂತ ಪ್ರೀತಿ, ಹಠಕ್ಕಿಂತ ತಾಳ್ಮೆ ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ.