

ಕುಂದಗೋಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಸೋಮವಾರ ಪಟ್ಟಣದಲ್ಲಿ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ವತಿಯಿಂದ ಬೃಹತ್ ‘ಜನಾಗ್ರಹ’ ಪ್ರತಿಭಟನೆ ನಡೆಯಿತು. ಈ ಹೋರಾಟದಲ್ಲಿ ಸಾವಿರಾರು ಭಕ್ತರು, ಮಠಾಧೀಶರು, ರೈತ ಮತ್ತು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡು, ಹೆಗ್ಗಡೆಯವರಿಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.
‘ಷಡ್ಯಂತ್ರ ಮಾಡಿದವರನ್ನು ಬಂಧಿಸಿ’
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜನಜಾಗೃತಿ ಗದಗ ಜಿಲ್ಲಾಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆ ತಾಲ್ಲುಕು ಅಧ್ಯಕ್ಷ ಶಿವಾನಂದ ಬೆಂತೂರ, “ನಮ್ಮ ಹೋರಾಟ ಸರ್ಕಾರಕ್ಕಲ್ಲ, ಧರ್ಮಕ್ಕೆ ಮಸಿ ಬಳಿಯುತ್ತಿರುವ ದುಷ್ಟರ ವಿರುದ್ಧ. ಸರ್ಕಾರ ಇಬ್ಬರನ್ನು ಬಂಧಿಸಿರುವುದು ಕೇವಲ ಕಣ್ಣೊರೆಸುವ ತಂತ್ರ. ಇದರ ಹಿಂದಿರುವ ಎಲ್ಲರನ್ನೂ ಬಂಧಿಸಬೇಕು,” ಎಂದು ಆಗ್ರಹಿಸಿದರು. ಅಲ್ಲದೆ, “ಪೂಜ್ಯರ ಒಂದು ಕರೆಗೆ ಕರ್ನಾಟಕದ ಆರು ಕೋಟಿ ಜನ ನಿಲ್ಲುತ್ತಾರೆ,” ಎಂದು ಘೋಷಿಸಿದರು. “ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಪೂಜ್ಯರ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಕಾನೂನಾತ್ಮಕವಾಗಿ ಬಂಧಿಸಬೇಕು,” ಎಂದು ಒತ್ತಾಯಿಸಿದರು.
‘ಪೂಜ್ಯರು 21ನೇ ಶತಮಾನದ ನಡೆದಾಡುವ ದೇವರು’
ಬಳಿಕ ಆಶೀರ್ವಚನ ನೀಡಿದ ಕಲ್ಯಾಣಪುರದ ಬಸವಣ್ಣಜ್ಜನವರು, “ಸಿದ್ದಗಂಗಾ ಶ್ರೀಗಳಂತೆಯೇ ಡಾ. ವೀರೇಂದ್ರ ಹೆಗ್ಗಡೆಯವರು ಕೂಡ 21ನೇ ಶತಮಾನದ ‘ನಡೆದಾಡುವ ದೇವರು’. ಬ್ಯಾಂಕಿಂಗ್ ವ್ಯವಹಾರ ತಿಳಿಯದ ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆಯ ದಾರಿ ತೋರಿದವರು ಇವರು. ಧರ್ಮಕ್ಕೆ ಕುತ್ತು ಬಂದಾಗ ನಾವು ಕೇವಲ ಪ್ರವಚನ ಹೇಳದೆ, ಅವರ ರಕ್ಷಣೆಗೆ ನಿಲ್ಲಲು ಸಿದ್ಧರಿದ್ದೇವೆ,” ಎಂದು ನುಡಿದರು.
ಸಂಶಿ ವಿರಕ್ತಮಠದ ಶ್ರೀ ಚನ್ನಬಸವೇಶ್ವರ ದೇವರು ಮಾತನಾಡಿ, “ಪೂಜ್ಯ ಹೆಗ್ಗಡೆಯವರು ಶಾಂತಿಪ್ರಿಯರು. ಅವರು ಈ ಹೋರಾಟಕ್ಕೆ ಕರೆ ನೀಡಿಲ್ಲ, ಇದು ಜನರ ಸ್ವಯಂಪ್ರೇರಿತ ಹೋರಾಟ. ಧರ್ಮಕ್ಕೆ ಅಪಾಯ ಬಂದಾಗ ನಾವು ಶಸ್ತ್ರ ಹಿಡಿಯಲು ಸಿದ್ಧ,” ಎಂದು ಎಚ್ಚರಿಕೆ ನೀಡಿದರು.
ಮೆರವಣಿಗೆ ಮತ್ತು ಮನವಿ ಸಲ್ಲಿಕೆ
ಪ್ರತಿಭಟನೆಯ ಆರಂಭದಲ್ಲಿ, ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಗಾಳಿ ಮಾರಿಯಮ್ಮ ದೇವಸ್ಥಾನದ ಬಳಿ ಸೇರಿದ್ದ ಸಾವಿರಾರು ಭಕ್ತರು ಡಾ. ವೀರೇಂದ್ರ ಹೆಗ್ಗಡೆಯವರಿಗೆ ಶಕ್ತಿ ನೀಡುವಂತೆ ಪ್ರಾರ್ಥಿಸಿ ಮಾನವ ಸರಪಳಿ ನಿರ್ಮಿಸಿದರು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೇರಿಗೆ ತಲುಪಿ, ತಹಶೀಲ್ದಾರ್ ರಾಜು ಮಾವರಕರ ಅವರಿಗೆ ಮನವಿ ಸಲ್ಲಿಸಿದರು. ವಿವಿಧ ಸಂಘ-ಸಂಸ್ಥೆಗಳು, ಹೋರಾಟಗಾರರು ಮತ್ತು ರೈತ ಸಂಘಟನೆಗಳ ಮುಖಂಡರು ಸಹ ಪ್ರತ್ಯೇಕವಾಗಿ ಮನವಿ ಪತ್ರಗಳನ್ನು ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ದೇವೇಂದ್ರಪ್ಪ ಕಾಗೆನವರ, ಅರವಿಂದ ಎಂ. ಕಟಗಿ, ಜಗದೀಶ್ ಉಪ್ಪಿನ, ರಮೇಶ್ ಕೊಪ್ಪದ, ಶ್ರೀಕಂಠಗೌಡ ಹಿರೇಗೌಡ್ರ, ಅಶೋಕ ಘೋರ್ಪಡೆ, ಕಲ್ಲಪ್ಪ ಹರಕುಣಿ, ಶಂಕರಗೌಡ ದೊಡ್ಡಮನಿ, ಪ್ರಭುಗೌಡ ಸಂಕ್ಯಾಗೌಡಶಾನಿ, ಕಹಿಮಸಾಬ ನಾಲಬಂದ, ಗಂಗಾಧರ ಗುಡೆಮ್ಮನವರ, ಗಿರೀಶಗೌಡ ಪಾಟೀಲ, ಹನುಮಂತಗೌಡ ಹಿರೇಗೌಡ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

