
ಡೆಹ್ರಾಡೂನ್ (ಉತ್ತರಾಖಂಡ): ತರಗತಿ ನಡೆಯುತ್ತಿರುವಾಗಲೇ ವಿದ್ಯಾರ್ಥಿಯೊಬ್ಬ ಶಿಕ್ಷಕನ ಮೇಲೆ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಬುಧವಾರ ನಡೆದ ಈ ಘಟನೆಯಲ್ಲಿ ಗಾಯಗೊಂಡ ಭೌತಶಾಸ್ತ್ರ ಶಿಕ್ಷಕ ಗಂಗನ್‌ದೀಪ್ ಸಿಂಗ್ ಕೊಹ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಏನಿದು ಘಟನೆ?
ಕೆಲ ದಿನಗಳ ಹಿಂದೆ ಶಿಕ್ಷಕ ಗಂಗನ್‌ದೀಪ್ ಸಿಂಗ್ ಕೊಹ್ಲಿ ಅವರು, ತಮ್ಮ ತರಗತಿಯ ವಿದ್ಯಾರ್ಥಿ ಸಮರತ್ ಬಾಜ್ವಾಗೆ ಸಹಪಾಠಿಗಳ ಮುಂದೆ ಕಪಾಳಮೋಕ್ಷ ಮಾಡಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿ, ಶಿಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದನು. ಬುಧವಾರ ಶಾಲೆಗೆ ತೆರಳುವಾಗ ಆತ ಟಿಫಿನ್ ಬಾಕ್ಸ್‌ನಲ್ಲಿ ಪಿಸ್ತೂಲ್ ಇಟ್ಟುಕೊಂಡು ಬಂದಿದ್ದನು.
ಮಧ್ಯಾಹ್ನದ ವಿರಾಮದ ಸಮಯದಲ್ಲಿ ಶಿಕ್ಷಕರು ವರಾಂಡದಲ್ಲಿ ಇದ್ದಾಗ, ಸಮರತ್ ತರಗತಿಯಿಂದ ಪಿಸ್ತೂಲ್ ತೆಗೆದುಕೊಂಡು ಹೊರಬಂದು ಶಿಕ್ಷಕರ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಿಂದ ಗಂಗನ್‌ದೀಪ್ ಸಿಂಗ್ ಕೊಹ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್, ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿ ಬಂಧನ:
ಶಿಕ್ಷಕನ ಮೇಲೆ ಗುಂಡು ಹಾರಿಸಿದ ಬಳಿಕ ಪರಾರಿಯಾಗಲು ಯತ್ನಿಸಿದ ಸಮರತ್ ಬಾಜ್ವಾನನ್ನು ಇತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 109ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ಮೂಡಿಸಿದೆ.

