ಚಿಕ್ಕಮಗಳೂರು: ಜೀಪ್ ಚಾಲಕ ಆತ್ಮಹತ್ಯೆ ಪ್ರಕರಣ; ಪೊಲೀಸರಿಂದ ಕಾನ್ಸ್​​ಟೇಬಲ್ ಬಂಧನ

Spread the love

ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಬಸ್ತಿಗದ್ದೆ ಗ್ರಾಮದ ಜೀಪ್ ಚಾಲಕ ನಾಗೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಿರುಕುಳ ನೀಡಿದ ಆರೋಪದ ಮೇಲೆ ಕುದುರೆಮುಖ ಪೊಲೀಸ್ ಠಾಣೆಯ ಕಾನ್ಸ್​​ಟೇಬಲ್ ಸಿದ್ದೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:
ಕಳೆದ ಜುಲೈ 17ರಂದು ಜೀಪ್ ಚಾಲಕ ನಾಗೇಶ್ ತನ್ನ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ, ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ರಸ್ತೆಯ ಮಧ್ಯದಲ್ಲಿ ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದರು. ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ನಿಲ್ಲುವಂತೆ ನಾಗೇಶ್ ಸೂಚಿಸಿದಾಗ, ಕೋಪಗೊಂಡ ಸಿದ್ದೇಶ್ ನಾಗೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ನಾಗೇಶ್ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಕಿರುಕುಳದಿಂದ ಬೇಸತ್ತ ನಾಗೇಶ್, ಆಗಸ್ಟ್ 13ರಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತದೇಹದ ಬಳಿ ಸಿಕ್ಕ ಡೆತ್ ನೋಟ್‌ನಲ್ಲಿ, ಪೊಲೀಸರ ಕಿರುಕುಳವೇ ತನ್ನ ಸಾವಿಗೆ ಕಾರಣ ಎಂದು ಬರೆದಿರುವುದಾಗಿ ವರದಿಯಾಗಿದೆ.

ಆರೋಪಿ ಬಂಧನ:
ಘಟನೆ ಬಳಿಕ ಸಾರ್ವಜನಿಕ ಮತ್ತು ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ಕುಟುಂಬಸ್ಥರು ಆರೋಪಿ ಬಂಧನವಾಗುವವರೆಗೂ ಮರಣೋತ್ತರ ಪರೀಕ್ಷೆಗೆ ಸಹಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಶಾಸಕಿ ನಯನ ಮೋಟಮ್ಮ ಕುಟುಂಬಸ್ಥರನ್ನು ಮನವೊಲಿಸಿದ ನಂತರ ಪ್ರಕ್ರಿಯೆಗಳು ನಡೆದವು.

ಆರೋಪ ಕೇಳಿಬರುತ್ತಿದ್ದಂತೆಯೇ ಕಾನ್ಸ್​​ಟೇಬಲ್ ಸಿದ್ದೇಶ್ ಗೋವಾಕ್ಕೆ ಪರಾರಿಯಾಗಿದ್ದ. ಪೊಲೀಸರು ತನಿಖೆ ನಡೆಸಿ, ಗೋವಾದಲ್ಲಿ ಆತನನ್ನು ಬಂಧಿಸಿ ಕರೆತಂದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣದ ಗಂಭೀರತೆಯನ್ನು ಅರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಯ್ಕೆ ಕೊಪ್ಪ ಅವರು ಡಿವೈಎಸ್‌ಪಿ ನೇತೃತ್ವದಲ್ಲಿ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *