

ಕುಂದಗೋಳ: ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ ಮಾರುತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕಡೆ ಸೋಮವಾರದಂದು ನಡೆದ ಶ್ರೀ ಬಸವಣ್ಣನವರ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಜಾತ್ರಾ ಕಾರ್ಯಕ್ರಮದ ನಿಮಿತ್ತ 24 ಗಂಟೆಗಳ ಕಾಲ ನಿರಂತರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾಯಂಕಾಲ ನಡೆದ ರಥೋತ್ಸವದಲ್ಲಿ ‘ಹರ ಹರ ಮಹಾದೇವ’ ಎಂಬ ನಾಮಘೋಷಗಳೊಂದಿಗೆ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಗ್ರಾಮದ ಶ್ರೀ ಮಾರುತಿ ದೇವಸ್ಥಾನದಿಂದ ಪ್ರಾರಂಭಗೊಂಡ ರಥೋತ್ಸವವು ಶಾಲಾ ಆವರಣದವರೆಗೆ ಸಾಗಿತು.
ಭಕ್ತರು ತಮ್ಮ ಇಷ್ಟಾರ್ಥಗಳು ಈಡೇರಲೆಂದು ಬಾಳೆಹಣ್ಣು, ಪೇರಲ ಹಣ್ಣು, ಉತ್ತತ್ತಿ ಮತ್ತು ದಾಳಿಂಬೆ ಹಣ್ಣುಗಳನ್ನು ರಥಕ್ಕೆ ಎಸೆದು ಹರಕೆ ಹೊತ್ತರು. ಈ ಸಂದರ್ಭದಲ್ಲಿ ಭಜನೆ, ಡೊಳ್ಳು ವಾದ್ಯ ಮತ್ತು ಇತರ ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಜಾತ್ರೆಯಲ್ಲಿ ಗ್ರಾಮದ ಗುರುಹಿರಿಯರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

