
ಲ್ಯಾಮಿಂಗ್ಟನ್ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ: ಇತಿಹಾಸದ ಅಧ್ಯಯನಕ್ಕೆ ಕರೆ ನೀಡಿದ ಸುರೇಶ ಕಿಣಿ
ಹುಬ್ಬಳ್ಳಿ: ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಯುವ ಪೀಳಿಗೆ ಕಲಿಯಬೇಕು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕು ಎಂದು ನಗರದ ಹಿರಿಯ ಸಾಹಿತಿ ಶ್ರೀ ಸುರೇಶ ಕಿಣಿ ಅವರು ಕರೆ ನೀಡಿದರು.
ಲ್ಯಾಮಿಂಗ್ಟನ್ ಪ್ರೌಢಶಾಲೆಗಳ ಆಶ್ರಯದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ. “ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅದೆಷ್ಟೋ ಮಹನೀಯರು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಅಂತಹ ಹೋರಾಟಗಾರರನ್ನು ನಾವು ಎಂದಿಗೂ ಮರೆಯಬಾರದು. ನಮ್ಮ ಇತಿಹಾಸದ ಹೋರಾಟವನ್ನು ಅರಿತು, ಸ್ವಾತಂತ್ರ್ಯವನ್ನು ಅನುಭವಿಸೋಣ. ಈ ಇತಿಹಾಸ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಬಲ್ಲದು” ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಪಥಸಂಚಲನ ಮತ್ತು ದೇಶಭಕ್ತಿ ಗೀತೆಗಳು ಸಮಾರಂಭದಲ್ಲಿ ಎನ್.ಸಿ.ಸಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಪ್ರಭಾತ ಫೇರಿ ಮತ್ತು ಪಥಸಂಚಲನ ನಡೆಸಲಾಯಿತು. ಇದು ಕೆ.ಪಿ. ಫುಲಾನೇಕರ್ ಮತ್ತು ಡಿ.ಜಿ. ಜಾಧವ್ ಅವರ ನೇತೃತ್ವದಲ್ಲಿ ನಡೆಯಿತು. ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡಿದರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣಗಳನ್ನು ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಶಶಿ ಸಾಲಿ, ಸದಸ್ಯರಾದ ಶ್ರೀ ಮುರುಘೇಶ್ ಕರ್ಜಗಿ, ಶ್ರೀ ಪ್ರಭಾಕರ ಹಿರೆಮಠ, ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಎನ್.ಜೆ. ದೇಶನೂರ, ಲ್ಯಾಮಿಂಗ್ಟನ್ ಶಾಲೆಗಳ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ಸುಮಂಗಲಾ ಶೇಠ್ ಸ್ವಾಗತಿಸಿದರೆ, ಶ್ರೀಮತಿ ಸೌಮ್ಯಪ್ರಭು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶ್ರೀಮತಿ ಶ್ರೀದೇವಿ ಮಡಿವಾಳರ ಅವರು ನಿರೂಪಿಸಿದರು.

