ಸುಪ್ರೀಂ ಕೋರ್ಟ್‌ನಿಂದ ದರ್ಶನ್‌, ಪವಿತ್ರಾ ಗೌಡ ಜಾಮೀನು ರದ್ದು; ಇಬ್ಬರ ಬಂಧನ

Spread the love

ಸುಪ್ರೀಂ ಕೋರ್ಟ್‌ನಿಂದ ದರ್ಶನ್‌, ಪವಿತ್ರಾ ಗೌಡ ಜಾಮೀನು ರದ್ದು; ಇಬ್ಬರ ಬಂಧನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ತೀವ್ರ ಹಿನ್ನಡೆಯಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ.
ತೀರ್ಪು ಪ್ರಕಟವಾದ ಬೆನ್ನಲ್ಲೇ, ಪೊಲೀಸರು ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ಬಂಧಿಸಿದ್ದಾರೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ಕರ್ನಾಟಕ ಹೈಕೋರ್ಟ್‌ನ ಜಾಮೀನು ಆದೇಶವನ್ನು ರದ್ದುಗೊಳಿಸಿದೆ. ಜಾಮೀನು ನೀಡಿರುವ ಕ್ರಮಕ್ಕೆ ನ್ಯಾಯಪೀಠ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಆರೋಪಿಗಳ ಬಂಧನ ಪ್ರಕ್ರಿಯೆ
ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪವಿತ್ರಾ ಗೌಡ ಅವರನ್ನು ಬಂಧಿಸಲು ಮಹಿಳಾ ಪೊಲೀಸರು ಆಗಮಿಸಿದರು. ಅವರಿಗೆ ಆದೇಶದ ಪ್ರತಿಯನ್ನು ನೀಡಿ, ಬಂಧನ ಪ್ರಕ್ರಿಯೆ ನಡೆಸಿದರು. ಜಾಮೀನು ರದ್ದಾದ ಕಾರಣ ಪವಿತ್ರಾ ಗೌಡ ಅವರು ಕಣ್ಣೀರಿಟ್ಟ ಘಟನೆಯೂ ನಡೆದಿದೆ ಎನ್ನಲಾಗಿದೆ. ಸದ್ಯ ಪೊಲೀಸರ ವಶದಲ್ಲಿರುವ ಪವಿತ್ರಾ ಗೌಡ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಬಳಿಕ ಪರಪ್ಪನ ಅಗ್ರಹಾರ ಅಥವಾ ಇನ್ನೊಂದು ಜೈಲಿಗೆ ಕಳುಹಿಸಲಾಗುತ್ತದೆ.
ದರ್ಶನ್ ಸೇರಿದಂತೆ ಜಾಮೀನು ರದ್ದಾದ ಇತರ ಆರೋಪಿಗಳಾದ ಲಕ್ಷ್ಮಣ್, ನಾಗರಾಜ್, ಪ್ರದೋಷ್, ಅನು ಕುಮಾರ್ ಮತ್ತು ಜಗದೀಶ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್‌ನ ಜಾಮೀನು ಆದೇಶವನ್ನು ರೇಣುಕಾಸ್ವಾಮಿ ಅವರ ಪತ್ನಿ ಚಿತ್ರಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅವರ ಮೇಲ್ಮನವಿಯ ವಿಚಾರಣೆ ನಡೆದು ಈ ಮಹತ್ವದ ತೀರ್ಪು ಪ್ರಕಟವಾಗಿದೆ.

Leave a Reply

Your email address will not be published. Required fields are marked *