
ನವಲಗುಂದ: ಧಾರವಾಡ ಜಿಲ್ಲೆಯಲ್ಲಿ 2025ರ ಮುಂಗಾರು ಅವಧಿಯಲ್ಲಿ ಸುರಿದ ಅತೀವೃಷ್ಟಿಯಿಂದ ಸಂಭವಿಸಿದ ಬೃಹತ್ ಪ್ರಮಾಣದ ಬೆಳೆ ಹಾನಿ ಪರಿಹಾರಕ್ಕೆ ಸರ್ಕಾರವು ಹೆಚ್ಚುವರಿಯಾಗಿ ರೂ. 60.00 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಹೊಸ ಅನುದಾನದೊಂದಿಗೆ, ರೈತರ ಖಾತೆಗಳಿಗೆ ಒಟ್ಟು ರೂ. 80.00 ಕೋಟಿ ಪರಿಹಾರ ಜಮಾ ಆಗಲಿದೆ ಎಂದು ಸ್ಥಳೀಯ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ಶುಕ್ರವಾರ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ನೀಡಿದ ಮಾಹಿತಿಯಂತೆ, ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಒಟ್ಟು 97,629.64 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆ ಹಾನಿ ಸಂಭವಿಸಿದೆ. ಇದರಲ್ಲಿ ಕೃಷಿ ಬೆಳೆ ಹಾನಿ ವಿಸ್ತೀರ್ಣ 93,230.86 ಹೆಕ್ಟೇರ್ ಆಗಿದ್ದರೆ, ತೋಟಗಾರಿಕೆ ಬೆಳೆಹಾನಿ ವಿಸ್ತೀರ್ಣ 4,398.78 ಹೆಕ್ಟೇರ್‌ನಷ್ಟಿದೆ. ಈ ಬೃಹತ್ ಹಾನಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರವು ತ್ವರಿತ ಕ್ರಮ ಕೈಗೊಂಡಿದೆ.
ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ರೂ. 20.00 ಕೋಟಿ ಹಣ ಜಮಾ ಇದ್ದು, ಹೊಸದಾಗಿ ಬಿಡುಗಡೆಗೊಂಡ ರೂ. 60.00 ಕೋಟಿ ಸೇರಿ ಒಟ್ಟು ರೂ. 80.00 ಕೋಟಿ ಅನುದಾನ ಲಭ್ಯವಾದಂತಾಗಿದೆ. ಈ ಮೊತ್ತವನ್ನು ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ (SDRF/NDRF) ಮಾರ್ಗಸೂಚಿಗಳ ಅನುಸಾರ, ಜಿಲ್ಲಾಧಿಕಾರಿಗಳ ಮೂಲಕ ಅರ್ಹ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಜಮಾ ಮಾಡಲು ಸರ್ಕಾರವು ಸೂಚನೆ ನೀಡಿದೆ.
ಬೆಳೆಹಾನಿ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಿ ರೈತರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಶಾಸಕ ಕೋನರಡ್ಡಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರುಗಳಿಗೆ ಜಿಲ್ಲೆಯ ಸಮಸ್ತ ರೈತರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

