ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿಯಲ್ಲಿ ‘ಅಕ್ರಮ’: ಸರ್ಕಾರದ ವಿರುದ್ಧ ರಮೇಶ ಕೋಲಕಾರ ಆರೋಪ

Spread the love

ನವಲಗುಂದ: ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮೂವರು ರಾಜ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರವು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅಕ್ರಮ ಎಸಗಿದೆ ಎಂದು ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತ ರಮೇಶ ಕೋಲಕಾರ (ಬೆಳಹಾರ, ನವಲಗುಂದ) ಗಂಭೀರವಾಗಿ ಆರೋಪಿಸಿದ್ದಾರೆ.

ನೇಮಕಾತಿ ಸಂಪೂರ್ಣ ರಹಸ್ಯ: ಸುಪ್ರೀಂ ನಿರ್ದೇಶನ ಉಲ್ಲಂಘನೆ
ಮಾಹಿತಿ ಆಯುಕ್ತರ ನೇಮಕಾತಿಗಾಗಿ ಒಟ್ಟು 109 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ರಹಸ್ಯವಾಗಿರಿಸಿ, ಸುಪ್ರೀಂ ಕೋರ್ಟ್‌ನ (ಮಿಸ್ಟೇನಿಯಸ್ ಅಪ್ಲಿಕೇಶನ್ ಸಂಖ್ಯೆ: 1779 of 2019) ನಿರ್ದೇಶನಗಳನ್ನು ಪಾಲಿಸಿಲ್ಲ ಎಂದು ಕೋಲಕಾರ ಕಿಡಿಕಾರಿದ್ದಾರೆ. ದೇಶದ ಸರ್ವೋಚ್ಚ ನ್ಯಾಯಾಲಯದ ಅಂಜಲಿ ಭಾರದ್ವಾಜ್‌ ಪ್ರಕರಣದ ತೀರ್ಪಿನ ಅನುಸಾರ, ರಾಜ್ಯ ಮಾಹಿತಿ ಆಯುಕ್ತರ ನೇಮಕಾತಿ ವೇಳೆ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಹೆಸರುಗಳು ಮತ್ತು ಸಾಧನೆಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು ಮತ್ತು ಆಕ್ಷೇಪಣೆಗಳನ್ನು ಪಡೆಯಲು ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಆದರೆ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಶೋಧನಾ ಸಮಿತಿ ಮತ್ತು ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಅಂತಿಮ ಆಯ್ಕೆ ಸಮಿತಿ ಈ ಯಾವುದೇ ನಿಯಮಗಳನ್ನು ಪಾಲಿಸದೆ, ತಮಗೆ ಬೇಕಾದ ಮೂವರು ಅಭ್ಯರ್ಥಿಗಳನ್ನು ಅಕ್ರಮವಾಗಿ ನೇಮಕ ಮಾಡಿರುವುದಾಗಿ ಅವರು ಆರೋಪಿಸಿದರು.

ಪಟ್ಟಿಯಲ್ಲಿ ಇಲ್ಲದಿದ್ದರೂ ಆಯ್ಕೆ: ನೇಮಕ ಅಸಿಂಧು
ಸರ್ಕಾರದ ಶೋಧನಾ ಸಮಿತಿ ಮುಖ್ಯಮಂತ್ರಿಗಳ ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಜ್ಯ ಮಾಹಿತಿ ಆಯುಕ್ತರಾದ ಡಾ. ಮಹೇಶ್ ವಾಳೇಕರ ಅವರ ಹೆಸರು ಇರಲಿಲ್ಲ. ಆದರೂ ಅವರನ್ನು ಅಂತಿಮ ಆಯ್ಕೆ ಸಮಿತಿ ಆಯ್ಕೆ ಮಾಡಿರುವುದು ಕಾನೂನಿನಲ್ಲಿ ಅಸಿಂಧು (ಅಕ್ರಮ) ಎಂದು ರಮೇಶ ಕೋಲಕಾರ ವಾದಿಸಿದ್ದಾರೆ.

ಸರ್ಕಾರದ ಕ್ರಮ ಪ್ರಶ್ನಿಸಿದ ಹೋರಾಟಗಾರ
“ತಮಗೆ ಬೇಕಾದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವುದಾದರೆ, ಸರ್ಕಾರವು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸುವ ಅಗತ್ಯವಿರಲಿಲ್ಲ,” ಎಂದು ಅವರು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಬಡತನ ರೇಖೆಗಿಂತ ಕೆಳಗಿರುವ ಅರ್ಜಿದಾರರಿಗೆ ₹1,20,000/- ಆದಾಯ ಮಿತಿಯವರೆಗೆ 100 ಪುಟಗಳ ಉಚಿತ ದಾಖಲೆಗಳನ್ನು ನೀಡುವಂತೆ ಸುತ್ತೋಲೆ ಹೊರಡಿಸಲು ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಆದರೆ, ಅವರ ಸಾಮಾಜಿಕ ಸಾಧನೆಯನ್ನು ಪರಿಗಣಿಸಿಲ್ಲ. ಪ್ರಭಾವ ಬಳಸಿ ನೇಮಕಗೊಂಡಿರುವ ಆಯುಕ್ತರು ಯಾವುದೇ ಕೊಡುಗೆ ನೀಡಿಲ್ಲ ಎಂದು ಅವರು ಟೀಕಿಸಿದರು.

ಕೂಡಲೇ ವಜಾಗೊಳಿಸಿ: ಕೋಲಕಾರ ಎಚ್ಚರಿಕೆ
ಈ ನೇಮಕಾತಿಯು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದೆ. ಮುಖ್ಯಮಂತ್ರಿಗಳಿಗೆ ಭಾರತದ ಸಂವಿಧಾನದಲ್ಲಿ ನಂಬಿಕೆ ಇದ್ದರೆ, ಕೂಡಲೇ ನೇಮಕಗೊಂಡಿರುವ ಮೂವರು ಮಾಹಿತಿ ಆಯುಕ್ತರನ್ನು ವಜಾಗೊಳಿಸಿ ಹಿಂದಕ್ಕೆ ಕರೆಸಿಕೊಳ್ಳಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗುತ್ತದೆ ಎಂದು ರಮೇಶ ಕೋಲಕಾರ ಎಚ್ಚರಿಕೆ ನೀಡಿದ್ದಾರೆ. ತಮ್ಮ ಆರೋಪಗಳಿಗೆ ಪೂರಕವಾದ ಎಲ್ಲಾ ನೈಜ ದಾಖಲೆಗಳನ್ನು ಪತ್ರಿಕಾ ಹೇಳಿಕೆ ಜೊತೆ ಲಗತ್ತಿಸಿರುವುದಾಗಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *