ಬೀದರ್‌ನಿಂದ ಬೆಂಗಳೂರಿಗೆ ಸಾಗುತ್ತಿರುವ ‘ಯುವ ಪರಿವರ್ತನೆ ಯಾತ್ರೆ’ ಹುಬ್ಬಳ್ಳಿಗೆ: ಬದಲಾವಣೆಗಾಗಿ ಯುವಕರ ಜಾಗೃತಿ ಕರೆ

Spread the love

ಹುಬ್ಬಳ್ಳಿ: ಜನಸಾಮಾನ್ಯರ ವೇದಿಕೆ ವತಿಯಿಂದ ಬೀದರ್‌ನಿಂದ ಬೆಂಗಳೂರುವರೆಗೆ ಹಮ್ಮಿಕೊಂಡಿರುವ ಜನಪರ ಯಾತ್ರೆ, ಯುವ ಪರಿವರ್ತನೆ ಯಾತ್ರೆಯ ರ್ಯಾಲಿಯು ಹುಬ್ಬಳ್ಳಿಗೆ ತಲುಪಿ ಅಲ್ಲಿಂದ ಹಾವೇರಿ ಕಡೆಗೆ ಸಾಗಿತು. ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ವ್ಯವಸ್ಥೆಯ ಬದಲಾವಣೆಗಾಗಿ ಯುವಜನರನ್ನು ತಲುಪುವ ಗುರಿಯನ್ನು ಈ ಯಾತ್ರೆ ಹೊಂದಿದೆ.

ಯಾತ್ರೆಯ ಉದ್ದೇಶ ಮತ್ತು ಸರ್ಕಾರಕ್ಕೆ ಎಚ್ಚರಿಕೆ
ಈ ವೇಳೆ ಮಾತನಾಡಿದ ವಕೀಲ ಹಾಗೂ ಜನಸಾಮಾನ್ಯರ ವೇದಿಕೆಯ ಸಂಚಾಲಕ ಯಲ್ಲಪ್ಪ ಹೆಗಡೆ, ಅಕ್ಟೋಬರ್ 2 ರಿಂದ ಪ್ರಾರಂಭವಾದ ಈ ಯಾತ್ರೆಯು ಬೀದರ್‌ನಿಂದ ಹಿಡಿದು ಕಲಬುರ್ಗಿ, ಯಾದಗಿರಿ, ಹುಬ್ಬಳ್ಳಿ ಹೀಗೆ ಒಟ್ಟು 12 ಜಿಲ್ಲಾ ಕೇಂದ್ರಗಳನ್ನು ಪ್ರವೇಶ ಮಾಡಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತಾಗಿ ಚರ್ಚೆಗೆ ಇಳಿಯಲು ಯುವಕರನ್ನು ಜಾಗೃತಗೊಳಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ.
“ಆಳುವ ಸರ್ಕಾರಗಳು ಮತ್ತು ವಿರೋಧ ಪಕ್ಷಗಳು ಈ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಅಲ್ಲದೆ, ಹೆಸ್ಕಾಂಗಳನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸುತ್ತೇವೆ. ಸರ್ಕಾರ ಇದನ್ನು ಕೂಡಲೇ ನಿಲ್ಲಿಸಬೇಕು” ಎಂದು ಅವರು ಎಚ್ಚರಿಸಿದರು.

ವಿದ್ಯಾರ್ಥಿಗಳಿಂದ ಬೆಂಬಲ
ಯಾತ್ರೆಯ ಕುರಿತು ಮಾತನಾಡಿದ ಅಭಿಗೌಡ, “ಯಾತ್ರೆಗೆ ಎಲ್ಲ ಜಿಲ್ಲೆಗಳಲ್ಲೂ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಧಾರವಾಡದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಇದೊಂದು ಸಂವಿಧಾನ ಬದ್ಧವಾದ ಸಂಘಟಿತ ಹೋರಾಟವಾಗಿ ಪರಿವರ್ತನೆಯಾಗಬೇಕು ಎಂದಾಗ ಅಲ್ಲಿನ ವಿದ್ಯಾರ್ಥಿಗಳೆಲ್ಲ ಬೆಂಬಲ ಸೂಚಿಸಿದ್ದಾರೆ” ಎಂದರು.
ನಗರದ ಮಂಜುನಾಥ್ ಕೊಂಡಪಲ್ಲಿ ಸಂಗೊಳ್ಳಿ ರಾಯಣ್ಣ ಪುತ್ತಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ಹುಬ್ಬಳ್ಳಿಯ ಎಲ್ಲ ಸಂಘಟನೆಗಳ ಪರವಾಗಿ ಪರಿವರ್ತನೆ ಯಾತ್ರೆಗೆ ಸ್ವಾಗತ ಕೋರಿದರು. ಸಮಾಜವನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ಮಾದಕ ವಸ್ತುಗಳ ಬಳಕೆ ವಿಪರೀತವಾಗಿದೆ, ಇದರಿಂದ ಯುವಜನತೆ ಹೊರಬರಬೇಕಿದೆ ಎಂದರು.

ಪ್ರಮುಖ ಬೇಡಿಕೆಗಳು
ಯುವ ಪರಿವರ್ತನೆ ಯಾತ್ರೆಯು ಸರ್ಕಾರವನ್ನು ಉದ್ದೇಶಿಸಿ ಈ ಕೆಳಗಿನ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿತು:

  • ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
  • ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಪ್ರಕಟಿಸಬೇಕು.
  • UPSC ಮಾದರಿಯಲ್ಲಿ KPSC ಅನ್ನು ಸುಧಾರಿಸಬೇಕು.
  • ಖಾಸಗಿ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಪ್ರಾಮುಖ್ಯತೆ ಕಲ್ಪಿಸಬೇಕು.
  • ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಿ ಉಚಿತವಾದ ಆರೋಗ್ಯ ಸೌಲಭ್ಯ ಒದಗಿಸಬೇಕು.
  • ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ನೀಡಬೇಕು.
  • ಕೃಷಿ ಉತ್ಪನ್ನಗಳಿಗೆ ಎಲ್ಲ ಋತುಗಳಲ್ಲಿ ಖಾತ್ರಿ ಬೆಲೆಯನ್ನು ಒದಗಿಸಬೇಕು.
  • ರೈತರಿಗೆ ಗುಣಮಟ್ಟದ ಬೆಳೆ ಆಧಾರಿತ ಬೀಜ ಕಿಟ್‌ಗಳನ್ನು ಬಿತ್ತನೆಯ ಸಕಾಲದಲ್ಲಿ ಒದಗಿಸಬೇಕು.
  • ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳಿಂದ ಆಹಾರ ತಯಾರಿಕಾ ತರಬೇತಿ ನೀಡಿ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಒದಗಿಸಬೇಕು.
  • ಸಮಗ್ರ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು.
  • ಗ್ರಾಮೀಣರಿಗೆ ಶಿಕ್ಷಣ, ತಂತ್ರಜ್ಞಾನ ಹಾಗೂ ಮಾರುಕಟ್ಟೆಗಳಿಗೆ ಹತ್ತಿರವಾಗಿರುವಂತೆ ಗುಣಮಟ್ಟದ ಬಸ್‌ಗಳನ್ನು ಒದಗಿಸಬೇಕು.
  • ಸರಕಾರಿ ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆಯಲ್ಲಿ ಎಸ್ಸಿ/ಎಸ್ಟಿ ಮತ್ತು 2ಎ ಗುತ್ತಿಗೆ ಮೀಸಲಾತಿಯನ್ನು ಜಾರಿಗೆ ತರಬೇಕು.
  • ಮಹಿಳೆಯರ ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಲೋಕಸಭೆ ಹಂತದವರೆಗೂ ರಾಜಕೀಯ ಮೀಸಲಾತಿಯನ್ನು ಒದಗಿಸಬೇಕು.

ಪರಿವರ್ತನೆ ಯಾತ್ರೆಯಲ್ಲಿ ಯುವಕರು, ಸ್ಥಳೀಯ ಸಂಘಟಕರು, ಯುವಕರು, ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *