

ನವಲಗುಂದ: ಇಂದಿನ ಕವಿಗಳ ಕಾವ್ಯಗಳ ಮಧ್ಯೆ, ನಮಗೆ ಧರ್ಮದ ಬೆಳಕನ್ನು ಕೊಟ್ಟ ದೈವ ಸಮಾನರಾದ ಆದಿಕವಿ ಮಹರ್ಷಿ ವಾಲ್ಮೀಕಿ ಅವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
(ಮಂಗಳವಾರ) ನವಲಗುಂದ ತಾಲ್ಲೂಕು ಆಡಳಿತ ಮತ್ತು ವಾಲ್ಮೀಕಿ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ಅವರು ಒಬ್ಬ ಋಷಿ ಮತ್ತು ಸುಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ ಆಗಿರುವ ಅವರನ್ನು ಮೊದಲ ಮಹಾಕಾವ್ಯ ರಚಿಸಿದ ಕಾರಣಕ್ಕೆ ಆದಿಕವಿ ಎಂದು ಕರೆಯಲಾಗುತ್ತದೆ. ತ್ರೇತಾಯುಗಕ್ಕೆ ಸೇರಿದ ಅವರ ರಾಮಾಯಣವನ್ನು ಕ್ರಿ.ಶ. ಪೂರ್ವ 500 ರಲ್ಲಿ ಬರೆಯಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ ಎಂದು ಕೋನರಡ್ಡಿ ಸ್ಮರಿಸಿದರು.
ಕ್ಷೇತ್ರದಲ್ಲಿ ಹೆಚ್ಚಿನ ವಾಲ್ಮೀಕಿ ಭವನ ನಿರ್ಮಾಣ
ಈ ಸಂದರ್ಭದಲ್ಲಿ ಶಾಸಕ ಕೋನರಡ್ಡಿ ಅವರು ತಾವು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
”ನಾನು ಈಗಾಗಲೇ ನವಲಗುಂದದ ಬಸವೇಶ್ವರ ನಗರದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನೂತನ ವಾಲ್ಮೀಕಿ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ. ಈ ಹಿಂದೆ ನವಲಗುಂದ ನಗರದಲ್ಲಿ ಭವ್ಯ ವಾಲ್ಮೀಕಿ ಭವನ ನಿರ್ಮಾಣಕ್ಕೆ 2.80 ಕೋಟಿ ರೂ. ಅನುದಾನ ನೀಡಲಾಗಿದೆ. ಈ ವರ್ಷ ಅದರ ಕಾಂಪೌಂಡ್ ನಿರ್ಮಾಣಕ್ಕಾಗಿ 85 ಲಕ್ಷ ರೂ. ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಅಲ್ಲದೇ, ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಾಲ್ಮೀಕಿ ಭವನಗಳು, ಸಮುದಾಯದ ಕಾಲೋನಿಗಳಲ್ಲಿ ರಸ್ತೆ ನಿರ್ಮಾಣ ಹಾಗೂ ಸಮಾಜದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ,” ಎಂದು ಕೋನರಡ್ಡಿ ವಿವರಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸುಧೀರ ಸಾವಕಾರ, ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗೀರದಾರ, ಪಿ.ಎಸ್.ಐ ಜನಾರ್ಧನ ಬಿ, ಬಿಇಒ ಎಸ್.ಬಿ. ಮಲ್ಲಾಡ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸಮಾಜದ ಮುಖಂಡರುಗಳಾದ ನಿಂಗಪ್ಪ ನಾಯ್ಕರ, ಸುಭಾಷ ದುಬ್ಬದಮಟ್ಟಿ, ಬೋನಪ್ಪ ತಳವಾರ, ಆರ್.ಎನ್. ಚಿಗರಿ, ಕುಮಾರ ಮಾದರ, ಸಂತೋಷ್ ಗುಜ್ಜಳ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

