ಸಹಕಾರ ಸಚಿವ ಸ್ಥಾನಕ್ಕೆ ಕೆ ಎನ್ ರಾಜಣ್ಣ ದಿಢೀರ್ ರಾಜೀನಾಮೆ

Spread the love

ಸಚಿವ ಸ್ಥಾನದಿಂದ ರಾಜಣ್ಣ ವಜಾ: ಪಕ್ಷದಲ್ಲಿ ಬಿರುಗಾಳಿ

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಹಕಾರ ಸಚಿವರಾಗಿದ್ದ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಮುಜುಗರ ತಂದಂತಹ ನಿರಂತರ ಹೇಳಿಕೆಗಳೇ ಈ ಕಠಿಣ ಕ್ರಮಕ್ಕೆ ಕಾರಣ ಎಂದು ತಿಳಿದುಬಂದಿದೆ.
ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರನ್ನು ಸಂಪುಟದಿಂದ ಕೈಬಿಟ್ಟಿದ್ದರೂ, ಪಕ್ಷದ ಶಿಸ್ತಿನ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ತಿಳಿಸಿವೆ.
ರಾಜ್ಯಪಾಲರಿಂದ ಆದೇಶ:
ಮಾಧ್ಯಮಗಳಲ್ಲಿ ನಿರಂತರವಾಗಿ ಪಕ್ಷ ಮತ್ತು ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ಪ್ರತಿಪಕ್ಷಗಳಿಗೆ ಆಹಾರವಾಗಿದ್ದ ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ಅವರ ವಿರುದ್ಧ ಪಕ್ಷ ಕಠಿಣ ಕ್ರಮಕ್ಕೆ ಮುಂದಾಗಿದೆ. ರಾಜಭವನದ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಸಚಿವರನ್ನು ತಕ್ಷಣದಿಂದಲೇ ಸಂಪುಟದಿಂದ ಕೈಬಿಡಲು ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಈ ಆದೇಶದ ಬಳಿಕ ರಾಜಣ್ಣ ಮೌನಕ್ಕೆ ಶರಣಾಗಿದ್ದಾರೆ.

ಅಪಸ್ವರದ ಹಾದಿ:
ಹನಿಟ್ರ್ಯಾಪ್ ಆರೋಪ: ಸಚಿವ ಸಂಪುಟ ಸೇರುವ ಮುನ್ನವೇ ‘ಹನಿಟ್ರ್ಯಾಪ್’ ಯತ್ನದ ಆರೋಪ ಮಾಡಿದ್ದ ರಾಜಣ್ಣ, ಪಕ್ಷಕ್ಕೆ ಮುಜುಗರ ತಂದಿದ್ದರು.

  • ಸುರ್ಜೆವಾಲಾ ವಿರುದ್ಧ ಹೇಳಿಕೆ: ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ವಿರುದ್ಧವೇ ಹೇಳಿಕೆ ನೀಡಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.
  • ಮತ ಕಳ್ಳತನ ಹೇಳಿಕೆ: ಇತ್ತೀಚೆಗೆ ‘ಮತ ಕಳ್ಳತನ’ ಆರೋಪದ ಕುರಿತು ಮಾತನಾಡಿ, “ನಮ್ಮದೇ ಸರ್ಕಾರ ಇದ್ದಾಗ ಮತದಾರರ ಪಟ್ಟಿ ಮಾಡಿದ್ದು, ಆಗ ಏನು ಕಣ್ಣು ಮುಚ್ಚಿ ಕುಳಿತಿದ್ದರಾ? ಈ ಬಗ್ಗೆ ನಮಗೆ ನಾಚಿಕೆಯಾಗಬೇಕು,” ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.
  • ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧವೂ ಬಹಿರಂಗವಾಗಿ ಕಿಡಿ ಕಾರಿದ್ದ ರಾಜಣ್ಣ, “ನಾನೇನು ಸಿಎಂ ಹೆಸರು ಬಳಸಿ ಡಾಲರ್ಸ್ ಕಾಲೋನಿ ಅಥವಾ ಸದಾಶಿವನಗರದಲ್ಲಿ ಮನೆ ಮಾಡಿಕೊಂಡಿದ್ದೇನಾ? ಡಿಸಿಎಂ ಆದವರಿಗೇನು ಕಿರೀಟ ಇರುವುದಿಲ್ಲ. ನನಗೆ ಯಾರೂ ಶಿಸ್ತಿನ ಪಾಠ ಮಾಡಬೇಕಿಲ್ಲ,” ಎಂದು ಗುಡುಗಿದ್ದರು.
    ಪಕ್ಷದ ಹಿರಿಯ ಮುಂಖಡರ ಹತ್ತಿರ ಪ್ರಶ್ನೆ:
    ರಾಜಣ್ಣ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ, ರಾಜಣ್ಣ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ಅವರು, ತಮ್ಮ ತಂದೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ರಾಜಕೀಯ ಪಯಣ:
1972ರಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಂಡ ರಾಜಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕ್ಯಾತಸಂದ್ರ ನಗರ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1998ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಅವರು, 2004ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ ಜೆಡಿಎಸ್‌ಗೆ ಸೇರಿ ಗೆಲುವು ಸಾಧಿಸಿದ್ದರು. ನಂತರ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದ ಅವರು, 2013ರಲ್ಲಿ ಮಧುಗಿರಿಯಿಂದ ವಿಧಾನಸಭೆ ಪ್ರವೇಶಿಸಿದ್ದರು. ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಸಹಕಾರ ಖಾತೆ ಸಚಿವರಾಗಿದ್ದರು. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ರಾಜಕೀಯ ಜೀವನದಲ್ಲಿ ಏಳು-ಬೀಳುಗಳ ಜೊತೆಗೆ ಈಗ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ‌ಇದೆ.

Leave a Reply

Your email address will not be published. Required fields are marked *