ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಮಕ್ಕಳು ದುರ್ಮರಣ

Spread the love

ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ದುರ್ಮರಣ

ಕುಷ್ಟಗಿ: ತಾಲ್ಲೂಕಿನ ಬಿಜಕಲ್ ಗ್ರಾಮದ ಪಂಚಾಯತ್ ಅಧ್ಯಕ್ಷರಾದ ಸಂಗಪ್ಪ ತೆಗ್ಗಿನಮನಿ ಅವರ ಪುತ್ರ ಹಾಗೂ ಅವರ ಸಹೋದರನ ಮಗಳು ಸೇರಿದಂತೆ ಇಬ್ಬರು ಮಕ್ಕಳು ಗ್ರಾಮದ ಕೃಷಿ ಹೊಂಡದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಈ ಘಟನೆ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರನ್ನು ತೀವ್ರ ದುಃಖಕ್ಕೆ ದೂಡಿದೆ ಮೃತರನ್ನು ಶ್ರವಣಕುಮಾರ್ ಸಂಗಪ್ಪ ತೆಗ್ಗಿನಮನಿ (8) ಮತ್ತು ಮಲ್ಲವ್ವ ನೀಲಪ್ಪ ತೆಗ್ಗಿನಮನಿ (11) ಎಂದು ಗುರುತಿಸಲಾಗಿದೆ. ಇಬ್ಬರೂ ಸಂಬಂಧದಲ್ಲಿ ಸೋದರ ಸಂಬಂಧಿಗಳಾಗಿದ್ದಾರೆ. ಘಟನೆ ನಡೆದಾಗ, ಇಬ್ಬರೂ ಮಕ್ಕಳು ಗ್ರಾಮದ ಹೊರಗೆ ಬಹಿರ್ದೆಸೆಗೆ ತೆರಳಿದ್ದರು.
ಇದೇ ವೇಳೆ, ನೀಲಪ್ಪ ತೆಗ್ಗಿನಮನಿ ಎಂಬುವರು ಕೃಷಿ ಹೊಂಡದಲ್ಲಿ ಎತ್ತುಗಳನ್ನು ತೊಳೆಯುತ್ತಿದ್ದರು. ಮಕ್ಕಳನ್ನು ನೋಡಿದ ಅವರು ಅಲ್ಲಿಂದ ಹೋಗುವಂತೆ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಮಕ್ಕಳು ಅಲ್ಲಿಯೇ ಆಟವಾಡುತ್ತಾ ಹೊಂಡದ ಆಳದ ಬಗ್ಗೆ ಅರಿವಿಲ್ಲದೆ ನೀರಿನಲ್ಲಿ ಇಳಿದಿದ್ದಾರೆ. ಹೊಂಡದ ಆಳ ಹೆಚ್ಚಾಗಿದ್ದರಿಂದ ಅವರು ಮುಳುಗಿದ್ದಾರೆ. ಮಕ್ಕಳು ಮನೆಗೆ ತಡವಾಗಿ ಹಿಂತಿರುಗಿದ್ದರಿಂದ ಗಾಬರಿಗೊಂಡ ಕುಟುಂಬದವರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ, ಕೃಷಿ ಹೊಂಡದಲ್ಲಿ ಮಕ್ಕಳ ಶವಗಳು ಪತ್ತೆಯಾಗಿವೆ. ಮಕ್ಕಳ ದುರಂತ ಸಾವಿನ ಸುದ್ದಿ ತಿಳಿದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಷ್ಟಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *