“ಆರೋಗ್ಯವೇ ಅಮೂಲ್ಯ ರತ್ನ; ಸ್ವಚ್ಛತೆಯೇ ಅದರ ಕವಚ”: ಸ್ವಚ್ಛತೆ ಕೊರತೆಯಿಂದ ಮಹಿಳೆಯರಲ್ಲಿ ಕ್ಯಾನ್ಸರ್; ಡಾ. ಜಮೀರಾ ಎಚ್ಚರಿಕೆ

Spread the love

ಧಾರವಾಡ: ಮಹಿಳೆಯರು ಆರೋಗ್ಯವಾಗಿರಲು ಸ್ವಚ್ಛತೆ ಅತಿ ಮುಖ್ಯ. ವಿಶೇಷವಾಗಿ ಮಾಸಿಕ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಜಾಗೃತಿ ಅನಿವಾರ್ಯವಾಗಿದ್ದು, ಅಶುದ್ಧತೆಯಿಂದಾಗಿ ಕ್ಯಾನ್ಸರ್‌ನಂತಹ ಗಂಭೀರ ರೋಗಗಳಿಗೆ ಬಲಿಯಾಗುವುದನ್ನು ತಡೆಯಬೇಕಿದೆ ಎಂದು ಸ್ತ್ರೀರೋಗ ತಜ್ಞೆ ಡಾ. ಜಮೀರಾ ಅವರು ಕಳವಳ ವ್ಯಕ್ತಪಡಿಸಿದರು.

ನಗರದ ಅಂಜುಮನ್ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಕೋಶ, ಎನ್ಎಸ್ಎಸ್ ಘಟಕ ಮತ್ತು ಟ್ರೂ ಲೈಫ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಆರೋಗ್ಯ ಮತ್ತು ಸ್ವಚ್ಛತೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಆರೋಗ್ಯವೇ ಅಮೂಲ್ಯ ರತ್ನ ಮತ್ತು ಸ್ವಚ್ಛತೆಯೇ ಅದರ ಕವಚವೆಂಬ ಸತ್ಯವನ್ನು ಪ್ರತಿಯೊಬ್ಬ ಮಹಿಳೆ ಅರಿಯಬೇಕು. ಕಾಯಿಲೆ ಬಂದ ಮೇಲೆ ಗುಣಪಡಿಸುವ ಪ್ರಯತ್ನ ಮಾಡುವುದಕ್ಕಿಂತ, ಕಾಯಿಲೆ ಬರುವ ಮೊದಲೇ ಜಾಗೃತ ವಹಿಸಿ ಅದನ್ನು ತಡೆಗಟ್ಟಲು ಪ್ರಯತ್ನಿಸುವುದು ಮುಖ್ಯ” ಎಂದು ಡಾ. ಜಮೀರಾ ಹೇಳಿದರು.

ಕ್ಯಾನ್ಸರ್‌ಗೆ ಬಲಿಯಾಗುವ ಮಹಿಳೆಯರು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಟ್ರೂ ಲೈಫ್ ಫೌಂಡೇಶನ್ ಅಧ್ಯಕ್ಷ ಡಾ. ಅಲ್ಲಾಹುದ್ದೀನ್ ಶೇಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ಇರುವುದರಿಂದ ಕ್ಯಾನ್ಸರ್‌ಗಳಂತಹ ವಿಭಿನ್ನ ಕಾಯಿಲೆಗಳಿಂದ ಬಳಲುತ್ತಿರುವುದು ಎದ್ದುಕಾಣುತ್ತಿದೆ. ಅದಕ್ಕಾಗಿ ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯದ ಕಾಳಜಿ ಅತ್ಯವಶ್ಯ ಎಂದರು.

ಮತ್ತೊಬ್ಬ ಮುಖ್ಯ ವಕ್ತಾರೆ ಡಾ. ಮೆಹರ್ ಅಫರೋಜ್ ಕಾಟೇವಾಡಿ ಮಾತನಾಡಿ, ಮಹಿಳಾ ಆರೋಗ್ಯದ ಸುಚಿತ್ವ ಕುರಿತು ಮುಕ್ತ ಚರ್ಚೆಗಳ ಮೂಲಕ ಜ್ಞಾನ ಒದಗಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.

ಆತ್ಮವಿಶ್ವಾಸ ಹೆಚ್ಚಳ ಮುಖ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪ್ರಾಧ್ಯಾಪಕ ಡಾ. ಅಸ್ಮನಾಸ್ ಬಳ್ಳಾರಿ ಮಾತನಾಡಿ, ಸ್ವಚ್ಛತೆಯ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ. ಆರೋಗ್ಯದ ಕಾಳಜಿಯ ಜೊತೆಗೆ ಪ್ರತಿ ಮಹಿಳೆ ತನ್ನಲ್ಲಿ ಆತ್ಮವಿಶ್ವಾಸ ಮತ್ತು ಆತ್ಮ ಗೌರವ ಬೆಳೆಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮ ಪ್ರಾರಂಭದಲ್ಲಿ ಕುಮಾರಿ ಸಬಿಹಾ ಕಾಜಿ ಕುರಹಾನ್ ಪಠಿಸಿದರು ಮತ್ತು ಕುಮಾರಿ ಮಾಬುನ್ನಿ ದಫೆದರ್ ಶ್ಲೋಕ ಪಠಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ. ಸೈಯದ್ ತಾಜುನ್ನಿಸಾ ಸ್ವಾಗತಿಸಿದರು. ಕಾಲೇಜು ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷೆ ಡಾ. ಸೌಭಾಗ್ಯ ಕೆ ಜಾದವ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಐ ಎ ಮುಲ್ಲಾ, ಐ.ಕ್ಯೂ ಎ.ಸಿ ಸಂಯೋಜಕ ಡಾ. ಏನ್ ಬಿ ನಲತವಾಡ, ಸಿಬ್ಬಂದಿ ಕಾರ್ಯದರ್ಶಿ ಡಾ. ಬಿಬಿ ಆಯಿಷಾ ಚಕೋಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಿಳಾ ಸಬಲೀಕರಣ ಸಮಿತಿಯ ಅಧ್ಯಕ್ಷೆ ಶ್ರುತಿ ಯಾವಗಲಮಠ ವಂದಿಸಿದರು.

Leave a Reply

Your email address will not be published. Required fields are marked *