ಹಫ್ತಾ ಕೊಡದ್ದಕ್ಕೆ ಮಾಜಿ ಸೈನಿಕನ ಮೇಲೆ ಪೊಲೀಸರ ದಾಳಿ: ಧಾರವಾಡದಲ್ಲಿ ಹಿಗ್ಗಾಮುಗ್ಗಾ ಥಳಿತ!

Spread the love

ಧಾರವಾಡ: ಹಫ್ತಾ (ಕಪ್ಪ) ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನಿವೃತ್ತ ಯೋಧನೊಬ್ಬರ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಭಯಾನಕ ಘಟನೆ ಧಾರವಾಡದ ಸಪ್ತಾಪುರದಲ್ಲಿ ನಡೆದಿದೆ. ಸೈನಿಕ್ ಮೆಸ್‌ ನಡೆಸುತ್ತಿದ್ದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರ ಮೇಲೆ ಉಪನಗರ ಠಾಣೆಯ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡದ ಸಪ್ತಾಪುರದಲ್ಲಿ ವಾಸವಿರುವ ರಾಮಪ್ಪ ನಿಪ್ಪಾಣಿ ಅವರೇ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಮಾಜಿ ಸೈನಿಕರಾಗಿದ್ದಾರೆ. ಸೇನೆಯಿಂದ ನಿವೃತ್ತರಾದ ಬಳಿಕ, ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಊಟ ಮತ್ತು ವಸತಿ ನೀಡುವ ‘ಸೈನಿಕ್ ಮೆಸ್‌’ ಅನ್ನು ಅವರು ನಡೆಸುತ್ತಿದ್ದರು.

ರಾತ್ರಿ 11 ಗಂಟೆಗೆ ದಾಳಿ!

ಕಳೆದ ಸೆಪ್ಟೆಂಬರ್ 28ರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಧಾರವಾಡ ಉಪನಗರ ಠಾಣೆಯ ಎಂಟರಿಂದ ಹತ್ತು ಮಂದಿ ಪೊಲೀಸರು ಸಪ್ತಾಪುರ ಬಾವಿ ಬಳಿಯ ರಾಮಪ್ಪ ಅವರ ಸೈನಿಕ್ ಮೆಸ್‌ಗೆ ಆಗಮಿಸಿದ್ದಾರೆ. ಬಂದ ಕೂಡಲೇ ಮೆಸ್ ಗೇಟ್ ಹಾಕುವಂತೆ ಪೊಲೀಸರು ರಾಮಪ್ಪ ಅವರಿಗೆ ತಾಕೀತು ಮಾಡಿದ್ದಾರೆ.

“ಇನ್ನೂ ನಾಲ್ಕೈದು ವಿದ್ಯಾರ್ಥಿಗಳು ಊಟಕ್ಕೆ ಬರಬೇಕಿದೆ ಸರ್, ದಯವಿಟ್ಟು ಅವಕಾಶ ಕೊಡಿ” ಎಂದು ಮಾಜಿ ಸೈನಿಕ ರಾಮಪ್ಪ ಅವರು ಕೇಳಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ಪೊಲೀಸರು, ರಾಮಪ್ಪ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಹಫ್ತಾ ಕೊಡದ್ದಕ್ಕೆ ಹಿಗ್ಗಾಮುಗ್ಗಾ ಥಳಿತ

ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರ ಮೇಲೆ ಎಂಟರಿಂದ ಹತ್ತು ಜನ ಪೊಲೀಸರು ಗುಂಪುಗೂಡಿ ಹಲ್ಲೆ ನಡೆಸಿದ್ದಾರೆ. ಮೆಸ್ ನಡೆಸಲು ನಿಯಮಿತವಾಗಿ ಕೇಳುವ ಹಫ್ತಾ ಹಣವನ್ನು ನೀಡದಿದ್ದೇ ಈ ದಾಳಿಗೆ ಮುಖ್ಯ ಕಾರಣ ಎಂದು ರಾಮಪ್ಪ ನಿಪ್ಪಾಣಿ ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸರು ತಮ್ಮ ಕೈಗೆ ಸಿಕ್ಕ ಹೆಲ್ಮೆಟ್‌ ಸೇರಿದಂತೆ ಅನೇಕ ವಸ್ತುಗಳಿಂದ ರಾಮಪ್ಪ ಅವರ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೇವಲ ಮಾಜಿ ಸೈನಿಕನ ಮೇಲೆ ಮಾತ್ರವಲ್ಲದೆ, ಮೆಸ್​ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಿಗೂ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ ಎನ್ನಲಾಗಿದೆ.

ಅಷ್ಟಕ್ಕೇ ಸುಮ್ಮನಾಗದ ಪೊಲೀಸರು, ಮೆಸ್‌ನಲ್ಲಿದ್ದ ಟೇಬಲ್, ಕುರ್ಚಿಗಳನ್ನು ಸಹ ಮುರಿದುಹಾಕಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿ ಹಾಕುವ ದುರುದ್ದೇಶದಿಂದ ಸಿಸಿಟಿವಿ ಫುಟೇಜ್ ಮತ್ತು ಮೊಬೈಲ್‌ಗಳನ್ನು ಕೂಡ ಪೊಲೀಸರು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಗಾಯಗೊಂಡ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ನೋವಿನಿಂದ ಹೇಳಿಕೊಂಡಿದ್ದಾರೆ.

ದೇಶ ಕಾಯುವ ಸೈನಿಕರಿಗೇ ಈ ರೀತಿಯ ಅವಮಾನ, ದೌರ್ಜನ್ಯ ಆಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *