

ಕುಂದಗೋಳ/ಧಾರವಾಡ: ಪರಿಶಿಷ್ಟ ಪಂಗಡದ (ST) ಪಟ್ಟಿಗೆ ಕುರುಬ ಹಾಗೂ ಇತರೆ ಸಮಾಜವನ್ನು ಸೇರಿಸಲು ಹುನ್ನಾರ ನಡೆಸಿರುವ ರಾಜ್ಯ ಸರ್ಕಾರದ ನಿರ್ಧಾರ ಮತ್ತು ನಕಲಿ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿರುವದನ್ನು ಖಂಡಿಸಿ ಅಖೀಲ, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮತ್ತು ವಾಲ್ಮೀಕಿ ಸಮಾಜದ ಮುಖಂಡರು ಗುರುವಾರ ಕುಂದಗೋಳದಲ್ಲಿ ಪ್ರಬಲ ಪ್ರತಿಭಟನೆ ನಡೆಸಿದರು.
ಪಟ್ಟಣದ ಗಾಳಿ ಮರೇಮ್ಮ ದೇವಸ್ಥಾನದಿಂದ ತಹಶಿಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಇತರೆ ಸಮುದಾಯಗಳ ಸೇರ್ಪಡೆಯಿಂದ ಮೂಲ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದು ದೂರಿದರು. ನಂತರ ತಹಶಿಲ್ದಾರ್ ರಾಜು ಮಾವರಕರ ಅವರಿಗೆ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಎಸ್.ಟಿ. ಸಮಾಜದ ತಾಲ್ಲೂಕು ಅಧ್ಯಕ್ಷ ರಾಜು ದೊಡ್ಡಶಂಕರ
“ಪರಿಶಿಷ್ಟ ಪಂಗಡದ (ST) ಜಾತಿಗಳ ಪಟ್ಟಿಯಲ್ಲಿ ಈಗಾಗಲೇ 51 ಜಾತಿಗಳಿವೆ. ಇದರಲ್ಲಿ ವಾಲ್ಮೀಕಿ ಸಮುದಾಯದ 8 ಪರ್ಯಾಯ ಪದಗಳನ್ನು ಸೇರಿಸಲಾಗಿದೆ. ನಮ್ಮ ಸಮುದಾಯದ ಜನಸಂಖ್ಯೆ ಸುಮಾರು 40 ಲಕ್ಷಕ್ಕೂ ಹೆಚ್ಚಿದ್ದು, ಬೇರೆ ಜಾತಿಗಳನ್ನು ಸೇರಿಸಿದರೆ ನಮಗೆ ಅನ್ಯಾಯವಾಗುತ್ತದೆ. ನಮ್ಮ ಶಾಸಕರು ಮತ್ತು ಸಚಿವರು ಸಮಾಜಕ್ಕೆ ಅನ್ಯಾಯವಾದಾಗ ಮಾತನಾಡುತ್ತಿಲ್ಲ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಉಗ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು,”
ರಾಜನಹಳ್ಳಿ ಗುರುಗಳ ಸಮ್ಮುಖದಲ್ಲಿ ಬೃಹತ್ ಪ್ರತಿಭಟನೆ ಶತಸಿದ್ಧ
ರಾಜು ದೊಡ್ಡಶಂಕರ ಅವರು ತಮ್ಮ ಮಾತನ್ನು ಮುಂದುವರೆಸಿ, “ಅನ್ಯ ಜಾತಿಯವರನ್ನು ಸಹ ನಮ್ಮ ಎಸ್.ಟಿ. ಪಟ್ಟಿಗೆ ಸೇರಿಸಲು ಈಗಿನ ಮುಖ್ಯಮಂತ್ರಿಗಳು ತಯಾರಿ ನಡೆಸುತ್ತಿದ್ದಾರೆ. ಇದು ಏನಾದರೂ ಮುಂದುವರೆದರೆ, ನಮ್ಮ ರಾಜನಹಳ್ಳಿಯ ಗುರುಗಳ (ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ) ಸಮ್ಮುಖದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಂತೂ ಶತಸಿದ್ಧ. ಪ್ರತಿಭಟನೆ ಸಮಯದಲ್ಲಿ ಏನಾದರೂ ಸಮಸ್ಯ ಯಾದರೆ, ಅದಕ್ಕೆ ನೇರ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.”
ಪಾದಯಾತ್ರೆ ಫಲಕ್ಕೆ ಧಕ್ಕೆ: ಹಿರಿಯರಿಂದ ಆಕ್ಷೇಪ
ಸಮಾಜದ ಹಿರಿಯರಾದ ಬಸವರಾಜ ನಾಯ್ಕರ ಅವರು ಮಾತನಾಡಿ, “ನಮ್ಮ ಸಮಾಜಕ್ಕೆ ಹಲವು ಕಾಲದಿಂದ ಅನ್ಯಾಯವಾಗುತ್ತಿದ್ದು, ನಾವು ಒಗ್ಗಟ್ಟಿನಿಂದ ಹೋರಾಟ ಮಾಡಿದ್ದೇವೆ. ಮೀಸಲಾತಿ ಹೆಚ್ಚಳಕ್ಕಾಗಿ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ರಾಜನಹಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿ 257 ದಿನಗಳ ಕಾಲ ಧರಣಿ ನಡೆಸಿದರು. ಆ ಹೋರಾಟದ ಫಲವಾಗಿ ಆಗಿನ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರವು ಬೇರೆ ಸಮುದಾಯಗಳನ್ನು ST ಪಟ್ಟಿಗೆ ಸೇರಿಸಲು ಮುಂದಾಗಿರುವುದು ಸರಿಯಲ್ಲ. ನಮ್ಮ ಸಮಾಜದ ಜೊತೆಗೆ ಯಾರೋ ಇಲ್ಲ ಸಲ್ಲದವರನ್ನು ಸೇರಿಸಿ ಅವರಿಗೆ ಮೀಸಲಾತಿ ನೀಡಲು ಹೊರಟಿರುವ ಸರ್ಕಾರಕ್ಕೆ ಮೊದಲಿಗೆ ದಿಕ್ಕಾರ ಹೇಳುತ್ತೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರವಿ ದೊಡ್ಮನಿ, ಈರಣ್ಣ ಗೌಡನಾಯ್ಕರ, ಅರ್ಜುನ್ ತಳವಾರ, ಶಿದ್ದಲಿಂಗಪ್ಪ ಕರಿಯಮ್ಮನವರ, ಶಂಕರಣ್ಣ ಹಿತ್ತಲಮನಿ, ಬಸವರಾಜ ಗೋವಿಂದಪ್ಪನವರ, ಸುಭಾಷ ಮುತಗಿ, ಮಂಜು ಹುಡೇದ, ಶೇಖರ ತಳವಾರ, ಶೇಖಣ್ಣ ಗುಂಜಳ, ಮಂಜುನಾಥ ಇಚ್ಚಂಗಿ, ನಾರಾಯಣ ಕುರಹಟ್ಟಿ, ಯಲ್ಲಪ್ಪ ಬಾರಕೇರ, ರಾಘವೇಂದ್ರ ನಾಯ್ಕರ, ಮತ್ತಿತರರು.

