

ಕುಂದಗೋಳ: ಜಾತಿ ಗಣತಿ ಸಮೀಕ್ಷೆಯವರು ಮನೆಗೆ ಬಂದಾಗ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಮತ್ತು ಜಾತಿಯ ಕಾಲಂನಲ್ಲಿ ‘ಲಿಂಗಾಯತ ಪಂಚಮಸಾಲಿ’ (ಕೋಡ್: 0868) ಎಂದು ನಮೂದಿಸುವಂತೆ ಸಮಾಜದ ಬಾಂಧವರಲ್ಲಿ ಮನವಿ ಮಾಡುವುದಾಗಿ ಲಿಂಗಾಯತ ಪಂಚಮಸಾಲಿ ತಾಲ್ಲೂಕು ಸಮಾಜದ ಅಧ್ಯಕ್ಷ ನಾಗರಾಜ ದೇಶಪಾಂಡೆ ತಿಳಿಸಿದರು. ಈ ಮಾಹಿತಿಯನ್ನು ಸಮಾಜದ ಇತರರಿಗೂ ತಲುಪಿಸುವಂತೆ ಅವರು ವಿನಂತಿಸಿಕೊಂಡರು.
ಪಟ್ಟಣದ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರ ಮಠದ ಆವರಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಬಸವ ಮೃತ್ಯುಂಜಯ ಸ್ವಾಮೀಜಿಗಳನ್ನು ಪೀಠದಿಂದ ಉಚ್ಛಾಟನೆ ಮಾಡುವ ಯಾವುದೇ ಅಧಿಕಾರ ವಿಜಯಾನಂದ ಕಾಶಪ್ಪನವರ್ ಅವರಿಗೆ ಇಲ್ಲ. ಅವರೊಬ್ಬರೇ ಇಡೀ ಸಮಾಜದ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರ ಈ ಏಕಪಕ್ಷೀಯ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಮಾಜ ಬಾಂಧವರಿದ್ದಾರೆ. ಸಮಾಜವೆಂದರೆ ಒಬ್ಬ ವ್ಯಕ್ತಿಯಲ್ಲ. ಕಾಶಪ್ಪನವರ್ ಅವರು ತಪ್ಪು ಮಾಡಿರಬಹುದು, ಆದರೆ ಸಮಾಜ ಅವರಿಗಿಂತ ದೊಡ್ಡದು. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾಶಪ್ಪನವರ್ ಯಾರು? ಅವರಿಗೆ ಆ ಹಕ್ಕನ್ನು ಕೊಟ್ಟವರಾರು? ಸಮಾಜವನ್ನು ಒಡೆಯುವ ಕೆಲಸ ಯಾರೂ ಮಾಡಬಾರದು. ಸಮಾಜದ ಒಗ್ಗಟ್ಟು ಎಂದಿನಂತೆ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.
ಯುವ ಮುಖಂಡ ಜಗನ್ನಾಥಗೌಡ ಸಿದ್ದನಗೌಡ್ರ ಅವರ ಮನವಿ
ಸಭೆಯಲ್ಲಿ ಯುವ ಮುಖಂಡ ಜಗನ್ನಾಥಗೌಡ ಸಿದ್ದನಗೌಡ್ರ ಮಾತನಾಡಿ, “ನಾವು ಇಂದಿನ ಸಭೆಯಲ್ಲಿ ಒಂದು ನಿರ್ಣಯವನ್ನು ಅಂಗೀಕರಿಸಿದ್ದೇವೆ. ಅದರಂತೆ, ಜಯಮೃತ್ಯುಂಜಯ ಶ್ರೀಗಳೇ ನಮ್ಮ ಗುರುಗಳು. ವಿಜಯಾನಂದ ಕಾಶಪ್ಪನವರ್ ಅವರ ತಂದೆ ಎಸ್.ಆರ್. ಕಾಶಪ್ಪನವರ್ ಅವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಅದನ್ನು ನಾವು ಮರೆಯುವುದಿಲ್ಲ. ಆದರೆ, ವಿಜಯಾನಂದ ಅವರು ಯಾವುದೋ ರಾಜಕೀಯ ಒತ್ತಡ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯದಿಂದ ಈ ನಿರ್ಧಾರ ತೆಗೆದುಕೊಂಡಂತಿದೆ. ದಯವಿಟ್ಟು ಸಮಾಜದ ಹಿತದೃಷ್ಟಿಯಿಂದ ತಮ್ಮ ನಿರ್ಧಾರವನ್ನು ವಾಪಸ್ ಪಡೆಯಬೇಕು” ಎಂದು ಮನವಿ ಮಾಡಿದರು.
“2A ಮೀಸಲಾತಿಗಾಗಿ ಶ್ರೀಗಳ ಜೊತೆ ರಾಜ್ಯಾದ್ಯಂತ ಹೆಜ್ಜೆ ಹಾಕಿದವರೇ ನೀವು. ಬರಗಾಲದಲ್ಲಿ ನಡೆದು ಸಮಾಜ ಕಟ್ಟಿದ ಶ್ರೀಗಳನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ವೈಯಕ್ತಿಕ ವಿಚಾರಗಳನ್ನು ಸಮಾಜದ ಮೇಲೆ ಹೇರಬೇಡಿ. ಮತ್ತೆ ಶ್ರೀಗಳ ಜೊತೆಗೂಡಿ ಸಮಾಜದ ಏಳಿಗೆಗೆ ಶ್ರಮಿಸಿ” ಎಂದು ಕಳಕಳಿಯ ವಿನಂತಿ ಮಾಡಿದರು.
ಸಮಾಜದ ಮುಖಂಡರಾದ ಡಾ. ಪ್ರಭುಗೌಡ ಸಂಕಾಗೌಡ ಶ್ಯಾನಿ ಅವರು ಮಾತನಾಡಿ, “ಹಿಂದೆ ಇದೇ ವಿಜಯಾನಂದ ಕಾಶಪ್ಪನವರ್ ಅವರು, ‘ಜಯಮೃತ್ಯುಂಜಯ ಸ್ವಾಮೀಜಿಗಳನ್ನು ಪಡೆದ ನಾವೇ ಧನ್ಯರು’ ಎಂದು ಹೇಳಿದ್ದರು. ಆದರೆ ಇಂದು ಅವರನ್ನೇ ಉಚ್ಛಾಟನೆ ಮಾಡುವ ಮಾತಾಡುತ್ತಿದ್ದಾರೆ. ಕಾಶಪ್ಪನವರ್ ಸ್ವಾಮೀಜಿಗಳ ‘ಉಚ್ಛಾಟನೆ’ ಮಾಡುತ್ತಿದ್ದಾರೋ ಅಥವಾ ‘ಹುಚ್ಚಾಟ’ ಮಾಡುತ್ತಿದ್ದಾರೋ ಎನ್ನುವುದು ತಾಲೂಕಿನ ಜನತೆಗೆ ತಿಳಿಯುತ್ತಿಲ್ಲ” ಎಂದು ಹೇಳಿದರು
“ಸ್ವಾಮೀಜಿಗಳನ್ನು ಉಚ್ಛಾಟನೆ ಮಾಡುವ ಅಧಿಕಾರವನ್ನು ಕಾಶಪ್ಪನವರ್ ಅವರಿಗೆ ಯಾರೂ ಕೊಟ್ಟಿಲ್ಲ, ನಾವು ಕೊಡುವುದೂ ಇಲ್ಲ. ಇದು ಅವರ ರಾಜಕೀಯ ಮತ್ತು ಸ್ವಯಂ ಪ್ರೇರಿತ ನಿರ್ಧಾರ. ಸಮಾಜವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು. ತಮ್ಮ ರಾಜಕೀಯ ಭವಿಷ್ಯ ಉಳಿಯಬೇಕಾದರೆ, ಕಾಶಪ್ಪನವರ್ ತಕ್ಷಣ ಸಮಾಜದ ಕ್ಷಮೆ ಕೇಳಿ, ತಮ್ಮ ನಿರ್ಧಾರವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ಒಟ್ಟಾರೆಯಾಗಿ ಕುಂದಗೋಳ ತಾಲೂಕಿನ ಪಂಚಮಸಾಲಿ ಸಮಾಜವು ಜಯಮೃತ್ಯುಂಜಯ ಸ್ವಾಮೀಜಿಗಳ ಪರವಾಗಿ ದೃಢವಾಗಿ ನಿಂತಿದ್ದು, ವಿಜಯಾನಂದ ಕಾಶಪ್ಪನವರ್ ಅವರ ನಿರ್ಧಾರವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಈ ಸಂದರ್ಭದಲ್ಲಿ ಸೋಮರಾವ್ ದೇಸಾಯಿ, ಜಿ.ಸಿ.ಪಾಟೀಲ, ಜಗನ್ನಾಥಗೌಡ ಸಿದ್ದನಗೌಡ್ರ, ಶಂಕರಗೌಡ ಹಿರೇಗೌಡ್ರ, ಡಾ:ಪ್ರಭುಗೌಡ ಸಂಕಾಗೌಡಶ್ಯಾನಿ, ವೈ.ಬಿ. ಬಿಳೆಬಾಳ, ಆರ್.ಬಿ. ಕಮತದ, ರಾಜುಗೌಡ ಪಾಟೀಲ, ಬಸವರಾಜ ನಾವಳ್ಳಿ, ಶೇಖಪ್ಪ ಬಾಳಿಕಾಯಿ, ಮಂಜುನಾಥ ಕಾಲವಾಡ, ಬಸವರಾಜ ಶಿರಸಂಗಿ, ವೇಂಕನಗೌಡ ಕಂಠೆಪ್ಪಗೌಡ್ರ, ಜಿ.ಎಸ್. ಯಲಿವಾಳ, ಸೋಮನಗೌಡ ಪಾಟೀಲ, ಚನ್ನಪ್ಪ ಮಲ್ಲೂರ, ಶಂಕ್ರಪ್ಪ ಸಂಗಣ್ಣವರ, ವೆಂಕನಗೌಡ ಬೀರವಳ್ಳಿ, ಯಲ್ಲಪ್ಪ ಸವಣೂರ, ವಿರುಪಾಕ್ಷ ಮೊರಬದ, ಮಂಜು ಕೊಪ್ಪದ ಸೇರಿದಂತೆ ಅನೇಕ ಸಮಾಜ ಮುಖಂಡರು ಉಪಸ್ಥಿತರಿದ್ದರು.

