

ಶೇಡಿಮನೆ ಹೊಳೆಯಿಂದ ಅಕ್ರಮ ಮರಳು ಸಾಗಣೆ: ಮೂರು ಟಿಪ್ಪರ್ ವಶ, ಮೂವರ ವಿರುದ್ಧ ಪ್ರಕರಣ ದಾಖಲು
ಸಿದ್ದಾಪುರ: ತಾಲೂಕಿನ ಶೇಡಿಮನೆ ಹೊಳೆಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಶಂಕರನಾರಾಯಣ ಪೊಲೀಸರು ಶನಿವಾರ ಮುಂಜಾನೆ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಯೂನೂಸ್ ಆರ್. ಗಡೇಕರ್ ನೇತೃತ್ವದ ತಂಡವು ಕುಳ್ಳುಂಜೆ ಗ್ರಾಮದ ಬಾಕುಡೆ ಪ್ರದೇಶದಲ್ಲಿ ದಾಳಿ ನಡೆಸಿತು. ಆರೋಪಿಗಳು ಅಕ್ರಮವಾಗಿ ತೆಗೆದ ಮರಳನ್ನು ಮೂರು ಟಿಪ್ಪರ್ಗಳಲ್ಲಿ ತುಂಬಿ ಸಂಗ್ರಹಿಸಿಟ್ಟಿದ್ದರು. ದಾಳಿ ವೇಳೆ, ಪೊಲೀಸರು ಟಿಪ್ಪರ್ಗಳನ್ನು ವಶಕ್ಕೆ ಪಡೆದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಚರಣ್, ಮಹೇಶ್ ಮತ್ತು ಸುಧೀರ್ ಎಂಬ ಮೂವರ ವಿರುದ್ಧ ಮರಳು ಕಳ್ಳತನದ ಆರೋಪದಡಿ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.

