

ಧಾರವಾಡ: ತಾಲೂಕಿನ ಗರಗ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಭೋವಿ ವಡ್ಡರ ಸಮಾಜ ಮತ್ತು ಗ್ರಾಮ ಪಂಚಾಯತಿ ನಡುವೆ ಬಿಕ್ಕಟ್ಟು ಉಂಟಾಗಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಗ್ರಾಮದಲ್ಲಿ ಶಾಂತಿ ಕದಡದಂತೆ ತಡೆಗಟ್ಟಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ವಿವಾದದ ಮೂಲ : ಗರಗ ಗ್ರಾಮದ 19 ಗುಂಟೆ ಗ್ರಾಮ ಪಂಚಾಯತಿ ಜಾಗದಲ್ಲಿ ಭೋವಿ ವಡ್ಡರ ಸಮಾಜದವರು ದುರ್ಗಮ್ಮ ದೇವಸ್ಥಾನ ನಿರ್ಮಿಸಿದ್ದರು. ಸೆಪ್ಟೆಂಬರ್ 23 ರಂದು ದೇವಿಯ ಪ್ರತಿಷ್ಠಾಪನೆ ಮತ್ತು ಮೆರವಣಿಗೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ದೇವಸ್ಥಾನ ನಿರ್ಮಿಸಿರುವ ಜಾಗ ಪಂಚಾಯತಿಗೆ ಸೇರಿದ್ದು ಎಂಬುದು ತಿಳಿದುಬಂದ ನಂತರ ವಿವಾದ ಆರಂಭವಾಗಿದೆ.
ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ದೇವಸ್ಥಾನ ನಿರ್ಮಿಸಿದ ವಿಷಯ ಗೊತ್ತಾದ ಕೂಡಲೇ, ಅಲ್ಲಿಯೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಯಿತು. ಇದು ವಿವಾದಕ್ಕೆ ಹೊಸ ತಿರುವು ನೀಡಿದೆ.
ಗ್ರಾಮ ಪಂಚಾಯತಿ ಹಾಗೂ ಭೋವಿ ಸಮಾಜದ ನಡುವೆ ಸಂಧಾನ ವಿಫಲ :
ಗ್ರಾಮ ಪಂಚಾಯತಿ ಆಡಳಿತ ಮಂಡಳಿಯು ವಿವಾದಿತ 19 ಗುಂಟೆ ಜಾಗದಲ್ಲಿ 2 ಗುಂಟೆ ಜಾಗವನ್ನು ಭೋವಿ ಸಮಾಜಕ್ಕೆ ಬಿಟ್ಟುಕೊಡುವುದಾಗಿ ಪ್ರಸ್ತಾಪಿಸಿತ್ತು. ಆದರೆ, ಸಮಾಜದವರು ಸಂಪೂರ್ಣ 19 ಗುಂಟೆ ಜಾಗ ತಮಗೆ ಬೇಕು ಎಂದು ಪಟ್ಟು ಹಿಡಿದ ಕಾರಣ ಸಂಧಾನ ಸಭೆ ವಿಫಲವಾಯಿತು. ಈ ಜಾಗದಲ್ಲಿ ಬೇರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ಇತ್ತು, ಅಲ್ಲದೆ ಇತರ ಸಮಾಜಗಳಿಗೂ ದೇವಾಲಯ ನಿರ್ಮಿಸಲು ಜಾಗ ನೀಡಲು ಬೇಡಿಕೆಗಳಿದ್ದವು ಎಂದು ಪಂಚಾಯತಿ ಹೇಳಿದೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಭೋವಿ ವಡ್ಡರ ಸಮಾಜ, ಆ ಜಾಗ ತಮ್ಮ ಸಮಾಜಕ್ಕೆ ಸೇರಿದೆ ಎಂದು ವಾದಿಸಿತು ಮತ್ತು ಗ್ರಾಮ ಪಂಚಾಯತಿ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿತು.
ಮಂಗಳವಾರ ದುರ್ಗಮ್ಮ ದೇವಸ್ಥಾನದ ಉದ್ಘಾಟನೆಗೆ ಸಿದ್ಧತೆ ನಡೆಸಿರುವ ಕಾರಣ ಪರಿಸ್ಥಿತಿ ಉದ್ವಿಗ್ನವಾಗಿದೆ.
ಪ್ರತಿಬಂಧಕಾಜ್ಞೆ ಜಾರಿ :
ಗ್ರಾಮದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ, ತಹಶೀಲ್ದಾರ್ ಡಾ. ಡಿ.ಎಚ್. ಹೂಗಾರ ಆದೇಶದ ಮೇರೆಗೆ ಸೋಮವಾರ ಮಧ್ಯಾಹ್ನ 12 ಗಂಟೆಯಿಂದಲೇ ಗರಗದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಸೆಪ್ಟೆಂಬರ್ 24 ರ ಸಂಜೆ 6 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿ ಇರಲಿದೆ. ದೇವಸ್ಥಾನದ ಉದ್ಘಾಟನೆ ಮತ್ತು ಮೆರವಣಿಗೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಡಾ. ಅಂಬೇಡ್ಕರ್ ಪ್ರತಿಮೆ ತೆರವು ವಿರೋಧಿಸಿ ಪ್ರತಿಭಟನೆ
ಧಾರವಾಡ: ಗರಗ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಅಖಿಲ ಕರ್ನಾಟಕ ವಡ್ಡರ ಭೋವಿ ಸಮಾಜ ಅಭಿವೃದ್ಧಿ ಟ್ರಸ್ಟ್ ಮತ್ತು ಸಮತಾ ಸೇನಾ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಗರಗ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಸದಸ್ಯರ ವಿರುದ್ಧ ಘೋಷಣೆಗಳನ್ನು ಕೂಗಿ, ತಕ್ಷಣವೇ ಅದೇ ಜಾಗದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಪ್ರತಿಮೆ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಮೂರು ದಿನಗಳಲ್ಲಿ ಪ್ರತಿಮೆ ಮರುಸ್ಥಾಪಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗುರು ಉಳ್ಳಿಕಾಶಿ, ಮಂಜುನಾಥ ಹಿರೇಮಠ, ವೆಂಕಟೇಶ ಮೇಸ್ತ್ರಿ, ಹರೀಶ ಪೂಜಾರ, ಪ್ರಕಾಶ ಪೂಜಾರ, ಮಂಜು ಮುಗಳಿ, ರಾಯಣ್ಣ ವಡ್ಡರ ಮತ್ತು ನಿಂಗಪ್ಪ ವಡ್ಡರ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

