

ಬೆಂಗಳೂರು: ಯಲಹಂಕ ಸಮೀಪದ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ 30 ವರ್ಷದ ಯುವತಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವನ್ನು ಜ್ಞಾನಭಾರತಿ ಪೊಲೀಸ್ ಠಾಣೆಯಿಂದ ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ದೂರುದಾರರಾದ ಉಪನ್ಯಾಸಕಿ ತಮ್ಮ ದೂರಿನಲ್ಲಿ, “ಸ್ವರೂಪ್ ಕುಮಾರ್ ಮತ್ತು ರಾಮಾಂಜನೇಯ ಎಂಬ ಇಬ್ಬರು ನನಗೆ ಮಾನಸಿಕ ಹಿಂಸೆ ನೀಡಿ, ಅಪಪ್ರಚಾರ ಮಾಡುತ್ತಿದ್ದರು. ಈ ಬಗ್ಗೆ ಈ ಹಿಂದೆಯೂ ದೂರು ನೀಡಿದ್ದೆ. ಆದರೆ, ದೂರು ನೀಡಿದ ನಂತರ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನನ್ನು ಅತಿಥಿ ಉಪನ್ಯಾಸಕ ಹುದ್ದೆಯಿಂದ ತೆಗೆದು ಹಾಕಿದ್ದರು” ಎಂದು ವಿವರಿಸಿದ್ದಾರೆ.
ಬೆದರಿಕೆ ಮತ್ತು ವಿಡಿಯೊ ಚಿತ್ರೀಕರಣ:
ದೂರಿನಲ್ಲಿ ಉಪನ್ಯಾಸಕಿ, “ಸ್ವರೂಪ್ ನನ್ನ ವಿಡಿಯೊ ಮಾಡುತ್ತಿದ್ದ. ಇದನ್ನು ಗಮನಿಸಿ, ನಾನು ಆಕ್ಷೇಪಿಸಿ ಅವನ ಮೊಬೈಲ್ ಕಸಿದುಕೊಂಡಾಗ, ಅದರಲ್ಲಿ ನನ್ನ ಬಗ್ಗೆ ಅಸಭ್ಯ ಮತ್ತು ಲೈಂಗಿಕವಾಗಿ ಬಳಸಿಕೊಳ್ಳುವ ಬಗ್ಗೆ ಮಾತನಾಡಿದ ವಿಡಿಯೊ ರೆಕಾರ್ಡ್ ಆಗಿತ್ತು. ಈ ಬಗ್ಗೆ ನಾನು ಪ್ರಶ್ನಿಸಿದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ನೀನು ಹಳ್ಳಿಯಿಂದ ಬಂದಿದ್ದೀಯ, ನಾವು ಹೇಳಿದ ಹಾಗೆ ಕೇಳಬೇಕು, ಹೇಳಿದ ಜಾಗಕ್ಕೆ ಬಂದು ನಮಗೆ ದೈಹಿಕ ಸುಖ ನೀಡಬೇಕು. ಇಲ್ಲವಾದರೆ ನಿನ್ನನ್ನು ಅಪಹರಣ ಮಾಡಿ ಎಂಜಾಯ್ ಮಾಡುತ್ತೇವೆ, ಕತ್ತರಿಸಿ ಬಿಸಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದರು” ಎಂದು ಉಲ್ಲೇಖಿಸಿದ್ದಾರೆ.
ಈ ಕುರಿತು ಪೊಲೀಸರು ಕಾನೂನು ಕ್ರಮ ಜರುಗಿಸಬೇಕು ಎಂದು ಮಹಿಳೆ ದೂರು ನೀಡಿದ್ದಾರೆ. ಐಜೂರು ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.

