

ಧಾರವಾಡ: “ಮಹಿಳೆ ಆರೋಗ್ಯವಂತಳಾಗಿದ್ದರೆ ಇಡೀ ಕುಟುಂಬವೇ ಸಶಕ್ತವಾಗಿರುತ್ತದೆ,” ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ‘ಸೇವಾ ಪಾಕ್ಷಿಕ’ ಆಚರಿಸಲಾಗುತ್ತಿದ್ದು, ಅದರ ಭಾಗವಾಗಿ ನಗರದಲ್ಲಿ ಆಯೋಜಿಸಿದ್ದ ‘ಸ್ವಸ್ಥ ನಾರಿ, ಸಶಕ್ತ ಪರಿವಾರ’ ರಾಷ್ಟ್ರವ್ಯಾಪಿ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
15 ದಿನಗಳ ಕಾಲ ವಿಶೇಷ ಆರೋಗ್ಯ ಅಭಿಯಾನ
ಪ್ರಧಾನಿ ಮೋದಿ ಮಧ್ಯಪ್ರದೇಶದ ಧಾರದಿಂದ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ 15 ದಿನಗಳ ಕಾಲ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ದೇಶಾದ್ಯಂತ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದಲ್ಲಿ ರಕ್ತದೊತ್ತಡ, ಮಧುಮೇಹ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್‌ನಂತಹ ಕಾಯಿಲೆಗಳ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ಕ್ಷಯಮುಕ್ತ ಜಿಲ್ಲೆಯ ಸಂಕಲ್ಪಕ್ಕೆ ಕರೆ
ಕ್ಷಯರೋಗ (ಟಿಬಿ) ನಿರ್ಮೂಲನೆಗೆ ಪ್ರಧಾನಿ ಮೋದಿ ನೀಡಿದ ಕರೆಯ ಮಹತ್ವವನ್ನು ಒತ್ತಿ ಹೇಳಿದ ಜೋಶಿ, “ನಾವೆಲ್ಲರೂ ನಮ್ಮ ಜಿಲ್ಲೆಯನ್ನು ದೇಶದ ಮೊದಲ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಂಕಲ್ಪ ಮಾಡೋಣ,” ಎಂದು ಕರೆ ನೀಡಿದರು. ಕ್ಷಯ ರೋಗಿಗಳನ್ನು ದತ್ತು ಪಡೆದು, ಅವರಿಗೆ ಚಿಕಿತ್ಸೆ ಮತ್ತು ನೈತಿಕ ಬೆಂಬಲ ನೀಡುವ ‘ನಿಕ್ಷಯ ಮಿತ್ರ’ರಾಗಿ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಕ್ಷಯಮುಕ್ತ ಭಾರತದ ಕನಸು ನನಸಾಗಲು ಸಾಧ್ಯ ಎಂದು ಅವರು ಹೇಳಿದರು.
ವ್ಯಸನಮುಕ್ತ ಸಮಾಜ ನಿರ್ಮಾಣ
ಯುವಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಮತ್ತು ಯುವಕರು ಮಾದಕ ವಸ್ತುಗಳ ಚಟದಿಂದ ದೂರವಿರಬೇಕು. ಈ ನಿಟ್ಟಿನಲ್ಲಿ ‘ನಶಾ ಮುಕ್ತ’ (ವ್ಯಸನ ಮುಕ್ತ) ಸಮಾಜ ನಿರ್ಮಾಣಕ್ಕಾಗಿ ಶೀಘ್ರದಲ್ಲೇ 10,000 ವಿದ್ಯಾರ್ಥಿಗಳನ್ನು ಒಳಗೊಂಡ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.
ಕಲಘಟಗಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿ
ಪ್ರಧಾನಿ ಮೋದಿ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಅಂಗವಾಗಿ, ಕಲಘಟಗಿ ತಾಲ್ಲೂಕಿನ ಕಿಮ್ಸ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ‘ಸ್ವಸ್ಥ ನಾರಿ ಸಶಕ್ತ ಪರಿವಾರ’, ‘ರಾಷ್ಟ್ರೀಯ ಪೋಷಣ್ ಮಾಹಾ’, ‘ಸುಮನ್ ಶಕ್ತಿ ಚಾಟ್‌ಬಾಟ್’ ಮತ್ತು ‘ಆದಿ ಸೇವಾ ಪರ್ವ್’ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಂತರ, ‘8ನೇ ರಾಷ್ಟ್ರೀಯ ಪೋಷಣ ಮಾಸ ಯೋಜನೆ’ ಅಡಿಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಮತ್ತು ತಾಯಿ-ಮಗು ಆರೋಗ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ನಾಗರಾಜ ಛಬ್ಬಿ, ಗ್ರಾಮೀಣ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಕಲಘಟಗಿ ಮಂಡಲ ಅಧ್ಯಕ್ಷ ಎಲ್ಲಾರಿ ಶಿಂಧೆ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ತಾಂಡಾದ ಗಣ್ಯರು ಹಾಗೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

