ಕುಂದಗೋಳದ ‘ಸಂಗೀತ ಕಾಶಿ’ಯಲ್ಲಿ ದಿ. ಸವಾಯಿ ಗಂಧರ್ವರ 73ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಸಂಗೀತೋತ್ಸವದ ವೈಭವ

Spread the love

ಕುಂದಗೋಳ: ‘ಸಂಗೀತ ಕಾಶಿ’ ಎಂದೇ ಖ್ಯಾತಿ ಪಡೆದಿರುವ ಕುಂದಗೋಳದಲ್ಲಿ, ದಿ. ಸವಾಯಿ ಗಂಧರ್ವರ 73ನೇ ಪುಣ್ಯತಿಥಿಯ ನಿಮಿತ್ತ ಆಯೋಜಿಸಲಾದ ಅಹೋರಾತ್ರಿ ಸಂಗೀತ ಮಹೋತ್ಸವವು ವೈಭವಯುತವಾಗಿ ಆರಂಭಗೊಂಡಿತು. ಪಟ್ಟಣದ ದಿ:ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ಚಾಲನೆ ನೀಡಿ, ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸ್ವಾಮೀಜಿಗಳು ತಮ್ಮ ವಿಶಿಷ್ಟ ಶೈಲಿಯಲ್ಲಿ ಮಾತನಾಡಿ, “ಭಾರತೀಯರ ಜೀವನದಿಂದ ಸಂಗೀತವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಜನನದಿಂದ ಮರಣದವರೆಗೂ ಸಂಗೀತ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೋಗುಳ, ಮಂತ್ರಗಳು, ಹಬ್ಬಗಳು ಹೀಗೆ ಪ್ರತಿಯೊಂದು ಹಂತದಲ್ಲೂ ಸಂಗೀತವಿದೆ,” ಎಂದು ಹೇಳಿದರು. ಇತ್ತೀಚೆಗೆ ಹಬ್ಬಗಳ ಹೆಸರಿನಲ್ಲಿ ನಡೆಯುತ್ತಿರುವ ‘ವಿಕೃತೀಕರಣ’ದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಈ ಸಂಗೀತೋತ್ಸವವು ನಿಜವಾದ ಹಬ್ಬ ಹೇಗೆ ಇರಬೇಕು ಎಂಬುದಕ್ಕೆ ಕುಂದಗೋಳದಲ್ಲಿ ನಡೆಯುವ ಸಂಗೀತೋತ್ಸವವೇ ಕಾರ್ಯಕ್ರಮವೇ ಉತ್ತಮ ಉದಾಹರಣೆಯಾಗಿದೆ,” ಎಂದರು.

ಶಾಸಕ ಎಂ. ಆರ್. ಪಾಟೀಲ್ ಮಾತನಾಡಿ, “ಒಂದು ತಿಂಗಳ ಪರಿಶ್ರಮದ ನಂತರ ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸುವುದು ಬಹಳ ಕಷ್ಟ. ಒಂದು ಲಗ್ನ ಮಾಡುವುದಕ್ಕಿಂತಲೂ ಕಠಿಣವಾದ ಕೆಲಸ,” ಎಂದು ಹೇಳಿ, “ವಿಶ್ವಸ್ಥ ಮಂಡಳಿ ತಂಡವಾಗಿ ಕೆಲಸ ಮಾಡುತ್ತಿದ್ದು, ಕುಂದಗೋಳದ ಸಂಗೀತ ಪರಂಪರೆಯನ್ನು ಉಳಿಸುವಲ್ಲಿ ಅವರ ಶ್ರಮ ಶ್ಲಾಘನೀಯವಾಗಿದೆ,” ಎಂದರು. ಮುಂದೆಯೂ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ದಿ. ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಚೇರಮನ್ನರಾದ ಅರವಿಂದ ಕಟಗಿ ಮಾತನಾಡಿ, “ಕಳೆದ 73 ವರ್ಷಗಳಿಂದ ನಿರಂತರವಾಗಿ ಈ ಮಹೋತ್ಸವ ನಡೆಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. ಸವಾಯಿ ಗಂಧರ್ವರ ಶಿಷ್ಯರಾದ ಪಂಡಿತ್ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಅವರಂತಹ ದಿಗ್ಗಜರು ಕುಂದಗೋಳವನ್ನು ತಮ್ಮ ತವರಮನೆ ಎಂದು ಪರಿಗಣಿಸಿದ್ದರು,” ಎಂದು ಸ್ಮರಿಸಿದರು. “ಸಂಸ್ಥೆಯ ಸದಸ್ಯರೆಲ್ಲರೂ ತಲಾ ಒಂದು ಲಕ್ಷ ರೂಪಾಯಿ ಹಾಕಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ,” ಎಂದು ಆರ್ಥಿಕ ಸವಾಲುಗಳ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ, ಪದ್ಮಶ್ರೀ ಶ್ರೀಮತಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ಸವಾಯಿ ಗಂಧರ್ವರ ರಾಷ್ಟ್ರೀಯ ಸಂಗೀತ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ವೇಳೆ ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ನಂತರ, ಪದ್ಮಶ್ರೀ ಶ್ರೀಮತಿ ಅಶ್ವಿನಿ ಭಿಡೆ ದೇಶಪಾಂಡೆ (ಗಾಯನ), ವಿದುಷಿ ಪದ್ಮನಿ ರಾವ್ (ಗಾಯನ), ಪಂ. ಉಮೇಶ ಚೌಧರಿ (ಗಾಯನ), ಪಂ. ಕೃಷ್ಣೇಂದ್ರ ವಾಡೀಕರ (ಗಾಯನ), ವಿದ್ವಾನ್ ದ್ವಾರಕೀಶ ಎಂ. (ವೀಣಾ ವಾದನ), ಪಂ. ಆನಂದ ಪಾಟೀಲ (ಹಿಂದುಸ್ತಾನಿ ಗಾಯನ) ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆದವು. ವೀಣಾ ವಾದನ ಹಾಗೂ ಹಿಂದುಸ್ತಾನಿ ಗಾಯನದ ಜುಗಲ್‌ಬಂದಿ ನೆರೆದಿದ್ದ ಸಂಗೀತ ಪ್ರೇಮಿಗಳ ಮನಸೂರೆಗೊಂಡಿತು. ರಾತ್ರಿ ವೇಳೆ, ಪಂ. ರತನ ಮೋಹನ ಶರ್ಮಾ, ಶ್ರೀಮತಿ ಶ್ರೀಮತಿ ದೇವಿ, ಶ್ರೀ ಅಭಿಷೇಕ ಜೋಶಿ, ಕುಮಾರ ಸ್ವರ ಶರ್ಮಾ, ಶ್ರೀಮತಿ ರಾಜೇಶ್ವರಿ ಪಾಟೀಲ, ಕುಮಾರ ಪೃಥ್ವಿರಾಜ ಕುಲಕರ್ಣಿ, ಕುಮಾರ ಹೇಮಂತ ಜೋಶಿ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆದು, ಎರಡು ರಾತ್ರಿ, ಎರಡು ಹಗಲು ಸಂಗೀತದ ಆರಾಧನೆ ನಡೆಯಲಿದೆ. ಮುಂಬೈ, ಮಧ್ಯಪ್ರದೇಶ, ಗುಜರಾತ್‌ನಿಂದಲೂ ಸಂಗೀತ ಪ್ರೇಮಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಷೇಶವಾಗಿತ್ತು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ಟಿ.ಎಸ್.ಗೌಡಪ್ಪನವರ, ಅರ್ಜುನ ನಾಡಗೀರ,ಮುತ್ತಣ್ಣ ತಡಸೂರ, ಈರಣ್ಣ ನಾಗರಾಳ,ನಾಗರಾಜ ದೇಶಪಾಂಡೆ,ಗಂಗಾಧರಯ್ಯ ನಾವಳ್ಳಿಮಠ, ಅಭಿಷೇಕ್ ಪಾಟೀಲ್, ಬಸವರಾಜ ಬ್ಯಾಹಟ್ಟಿ,ವೀಣಾ ಹಾನಗಲ್ ಸೇರಿದಂತೆ ಅನೇಕ ಗಣ್ಯರು , ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸಂಗೀತೋತ್ಸವ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಲಿಂಗೇಶ ಧಾರವಾಡಶಟ್ಟರ ಸ್ವಾಗತಿಸಿದರು, ಡಾ!ಎನ್.ಎಸ್.ಕುಸುಗಲ್ ಕಾರ್ಯಕ್ರಮವನ್ನು ನಿರೂಪಿಸಿದರು, ಶಂಕರಗೌಡ ದೊಡ್ಡಮನಿ ವಂದಿಸಿದರು.

ಪೋಟೋ: 01
ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ನಡೆದ ದಿ. ಸವಾಯಿ ಗಂಧರ್ವ 73 ನೇ ಪುಣ್ಯತಿಯ ಅಂಗವಾಗಿ ನಡೆದ ಸಂಗೀತ ಮಹೊತ್ಸವದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಶ್ರೀ ಮತಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ಸವಾಯಿ ಗಂಧರ್ವರ ರಾಷ್ಟ್ರೀಯ ಸಂಗೀತ ಪುರಸ್ಕೃರು ಇವರು ಸಂಗೀತ ನಡೆಸಿದರು.

ಪೋಟೋ:02
ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ನಡೆದ ದಿ. ಸವಾಯಿ ಗಂಧರ್ವ 73 ನೇ ಪುಣ್ಯತಿಯ ಅಂಗವಾಗಿ ನಡೆದ ಸಂಗೀತ ಮಹೊತ್ಸವದ ಕಾರ್ಯಕ್ರಮಕ್ಕೆ ವಿವಿಧ ಗಣ್ಯಮಾನ್ಯರು ಚಾಲನೆ ನೀಡಿದರು.

ಪೋಟೋ: 03
ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ನಡೆದ ದಿ. ಸವಾಯಿ ಗಂಧರ್ವ 73 ನೇ ಪುಣ್ಯತಿಯ ಅಂಗವಾಗಿ ನಡೆದ ಸಂಗೀತ ಮಹೊತ್ಸವದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಶ್ರೀ ಮತಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಗೆ ಸವಾಯಿ ಗಂಧರ್ವರ ರಾಷ್ಟ್ರೀಯ ಸಂಗೀತ ಪುರಸ್ಕಾರ ಅವರಿಗೆ ವಿವಿಧ ಗಣ್ಯಮಾನ್ಯರು ‌ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *