
ಬೆಂಗಳೂರು: ನಾಡಹಬ್ಬ ದಸರಾವನ್ನು ಉದ್ಘಾಟಿಸಲು ಬುಕ್ಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವವರು ಇತಿಹಾಸದ ಅರಿವಿಲ್ಲದ ಧರ್ಮಾಂಧರು ಎಂದು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮೈಸೂರು ದಸರಾ ಉದ್ಘಾಟಕ್ಕೆ ಆಯ್ಕೆ ಕುರಿತ ಉನ್ನತ ಮಟ್ಟದ ಸಮಿತಿಯು ತಮಗೆ ನೀಡಿದ ಅಧಿಕಾರದನ್ವಯ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. “ದಸರಾ ನಾಡಹಬ್ಬವಾಗಿದ್ದು, ಇದನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕು ಎಂದೇನಿಲ್ಲ. ನಾಡ ಹಬ್ಬ ಎಲ್ಲರಿಗೂ ಸೇರಿದ್ದು” ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಇತಿಹಾಸ ಉಲ್ಲೇಖಿಸಿದ ಸಿಎಂ:
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಮುಖ್ಯಮಂತ್ರಿಗಳು ಇತಿಹಾಸದ ಉದಾಹರಣೆಗಳನ್ನು ನೀಡಿದರು. ಹಿಂದೆಯೂ ಕವಿ ನಿಸಾರ್ ಅಹಮದ್ ಅವರು ದಸರಾವನ್ನು ಉದ್ಘಾಟಿಸಿದ್ದರು. ಅಲ್ಲದೆ, ಮಹಾರಾಜರ ಆಡಳಿತ ಇಲ್ಲದಿದ್ದಾಗಲೂ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸುತ್ತಿದ್ದರು. ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರೂ ದಸರಾ ಆಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿದ್ದಾರೆ. ಆದ್ದರಿಂದ, ದಸರಾ ಒಂದು ಧರ್ಮಾತೀತ ಮತ್ತು ಜಾತ್ಯಾತೀತ ಹಬ್ಬ ಎಂದು ಅವರು ಪ್ರತಿಪಾದಿಸಿದರು.
ಬಿಜೆಪಿ ವಿರುದ್ಧ ಕಿಡಿ:
ಕರ್ನಾಟಕದಲ್ಲಿ ಬೂಕರ್ ಪ್ರಶಸ್ತಿ ಪಡೆದ ಸಾಹಿತಿಗಳು ಅತ್ಯಂತ ವಿರಳವಾಗಿದ್ದಾರೆ. ಬಾನು ಮುಸ್ತಾಕ್ ಅವರನ್ನು ದಸರಾ ಉದ್ಘಾಟಕಿಯಾಗಿ ಆಯ್ಕೆ ಮಾಡಿರುವುದರ ಕುರಿತು ಧರ್ಮಾಂಧರು ಮಾತ್ರ ಮಾತನಾಡುತ್ತಾರೆ. ಅವರಿಗೆ ಇತಿಹಾಸದ ಅರಿವಿಲ್ಲ. ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಮಾತನಾಡುತ್ತಾರೆಯೇ ಹೊರತು ಜಾತ್ಯಾತೀತವಾಗಿ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಆರೋಪಿಸಿದರು. ಬಾನು ಮುಸ್ತಾಕ್ ಅವರಿಗೆ ಕನ್ನಡ ಮತ್ತು ಕನ್ನಡ ತಾಯಿಯ ಬಗ್ಗೆ ಗೌರವ, ಅಭಿಮಾನ ಇಲ್ಲದೇ ಇದ್ದರೆ ಕನ್ನಡದಲ್ಲಿ ಕೃತಿಗಳನ್ನು ಬರೆಯುತ್ತಾರೆಯೇ ಎಂದು ಸಿಎಂ ಪ್ರಶ್ನಿಸಿದ್ದಾರೆ. ವಿರೋಧಿಗಳು ಕುಂಟು ನೆಪ ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.
ಕೃತಿಗಳಿಗೆ ಗೌರವ:
ಬಾನು ಮುಸ್ತಾಕ್ ಅವರ `ಎದೆಯ ಹಣತೆ’ ಕೃತಿಯನ್ನು ಭಾಷಾಂತರಿಸಿದ ದೀಪಾ ಭಾಸ್ತಿ ಅವರನ್ನೂ ಸರ್ಕಾರ ಸ್ಮರಿಸಿದೆ. ಸರ್ಕಾರ ಈಗಾಗಲೇ ಬಾನು ಮುಸ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ತಲಾ ಹತ್ತು ಲಕ್ಷ ರೂ. ನೀಡಿ, ಸನ್ಮಾನಿಸಿ ಗೌರವಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

