ಅಮ್ಮಿನಭಾವಿ, ಹೆಬ್ಬಳ್ಳಿ ಗ್ರಾಮಗಳಿಗೆ ಜಿ.ಪಂ. ಸಿಇಓ ಭುವನೇಶ ಪಾಟೀಲ್ ಭೇಟಿ: ವಿವಿಧ ಕಾಮಗಾರಿಗಳ ಪರಿಶೀಲನೆ

Spread the love

ಧಾರವಾಡ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್ ಅವರು ಶನಿವಾರ ಧಾರವಾಡ ತಾಲೂಕಿನ ಅಮ್ಮಿನಭಾವಿ ಹಾಗೂ ಹೆಬ್ಬಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಜಲಜೀವನ್ ಮಿಷನ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

​ಅಮ್ಮಿನಭಾವಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ, ಜಲಜೀವನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆ ಹಾಗೂ ಡಿಬಿಓಟಿ (DBOT) ಕುಡಿಯುವ ನೀರಿನ ಘಟಕದ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟ ಸಿಇಓ ಅವರು, ಆಸ್ಪತ್ರೆಯ ನೋಂದಣಿ ಪುಸ್ತಕ ಹಾಗೂ ಸಾರ್ವಜನಿಕರ ದಾಖಲಾತಿ ವಹಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಸಾರ್ವಜನಿಕರಿಗೆ ಯಾವುದೇ ವಿಳಂಬವಿಲ್ಲದೆ ಸಕಾಲಕ್ಕೆ ಉಚಿತ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

​ಬಳಿಕ ಹೆಬ್ಬಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಮನೆಗಳಿಗೆ ನೀಡಲಾದ ನಳದ ಸಂಪರ್ಕಗಳ ಗುಣಮಟ್ಟ, ನೀರಿನ ಮೀಟರ್ ಅಳವಡಿಕೆ ಹಾಗೂ ಪೈಪ್‌ಲೈನ್ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿದರು. ಫೀಲ್ಡ್ ಟೆಸ್ಟ್ ಕಿಟ್‌ಗಳ (FTK) ಮೂಲಕ ನಡೆಸಲಾಗುವ ನೀರಿನ ಗುಣಮಟ್ಟ ಪರೀಕ್ಷೆ ಮತ್ತು ರಸ್ತೆ ಪುನರ್ ಸ್ಥಾಪನೆ ಕಾರ್ಯಗಳನ್ನು ಪರಿಶೀಲಿಸಿದ ಅವರು, ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗದಂತೆ ಸ್ಥಿರತೆ ಕಾಪಾಡಲು ನಿರ್ದೇಶಿಸಿದರು.

​ಈ ಭೇಟಿಯ ಸಂದರ್ಭದಲ್ಲಿ ಧಾರವಾಡ ತಹಶೀಲ್ದಾರ ಡಾ. ಡಿ.ಎಚ್. ಹೂಗಾರ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಂಗಾಧರ ಕಂದಕೂರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *