ಯುವನಿಧಿ ಪ್ರಗತಿ ಕುಂಠಿತ: ಗೃಹಲಕ್ಷ್ಮಿಯಲ್ಲಿ ಉತ್ತಮ ಸಾಧನೆ; ಜಿಲ್ಲಾ ಪಂಚಾಯತ್‌ನಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ, ಅಧ್ಯಕ್ಷ ಎಸ್.ಆರ್. ಪಾಟೀಲ ಸೂಚನೆ

Spread the love

📰 ಜಿಲ್ಲಾ ಪಂಚಾಯತದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

ಧಾರವಾಡ, ನ. 05: ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು (ನವೆಂಬರ್ 5) ಗ್ಯಾರಂಟಿ ಯೋಜನೆಗಳ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ಅಧ್ಯಕ್ಷತೆ ವಹಿಸಿ, ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಿದರು.

ಸಭೆಯಲ್ಲಿ ಅವರು ಮಾತನಾಡಿ, “ಯುವನಿಧಿ ಯೋಜನೆಯ ಪ್ರಗತಿ ನಿರೀಕ್ಷಿತ ಮಟ್ಟಕ್ಕಿಂತ ಕುಂಠಿತವಾಗಿದೆ. ಈ ಯೋಜನೆಯ ಬಗ್ಗೆ ತಾಲೂಕು ಹಾಗೂ ಗ್ರಾಮ ಮಟ್ಟದ ಜೊತೆಗೆ ನಗರದಲ್ಲಿಯೂ ಹೆಚ್ಚಿನ ಜಾಗೃತಿ ಮೂಡಿಸಲು ಅಗತ್ಯವಿದೆ. ಪ್ರತಿ ತಿಂಗಳು ಕನಿಷ್ಠ 10 ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಯೋಜನೆಯ ಕುರಿತು ಮಾಹಿತಿ ನೀಡುವ ಮೂಲಕ ಪ್ರಗತಿಯನ್ನು ವೇಗಗೊಳಿಸಬೇಕು,” ಎಂದು ಸೂಚಿಸಿದರು.

ಗೃಹಲಕ್ಷ್ಮಿ ಯೋಜನೆಯ ಪ್ರಗತಿಯನ್ನು ವಿವರಿಸಿದ ಅವರು, “ಧಾರವಾಡ ಜಿಲ್ಲೆಯಲ್ಲಿ ಒಟ್ಟು 4,04,848 ಫಲಾನುಭವಿಗಳಲ್ಲಿ 3,95,336 ಜನರು ನೋಂದಾಯಿತರಾಗಿದ್ದಾರೆ. ಪ್ರತಿ ಫಲಾನುಭವಿಗೆ ₹2,000 ಗಳಂತೆ ಒಟ್ಟು ₹1,584 ಕೋಟಿ 89 ಲಕ್ಷ 56 ಸಾವಿರ ರೂ.ಗಳನ್ನು ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ 97.65 ಶೇಕಡಾ ಪ್ರಗತಿ ಸಾಧನೆಯಾಗಿದೆ. ಬಾಕಿ ಅರ್ಜಿಗಳನ್ನು ಶೀಘ್ರವಾಗಿ ಪರಿಶೀಲಿಸಿ ವಿಲೇವಾರಿ ಮಾಡಬೇಕು,” ಎಂದರು.

ಸಭೆಯಲ್ಲಿ ಸದಸ್ಯ ಅರವಿಂದ ಏಗನಗೌಡರ ಅವರು ಮಾತನಾಡಿ, “ಯುವನಿಧಿ ಯೋಜನೆ ಕುರಿತು ಇಲಾಖೆಯ ಅಧಿಕಾರಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿಯನ್ನು ನೀಡದಿರುವ ಬಗ್ಗೆ ದೂರುಗಳು ಬಂದಿದೆ. ಪ್ರತಿ ತಿಂಗಳು ಕನಿಷ್ಠ ಐದು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಉಪಾಧ್ಯಕ್ಷ ಮುರಗಯ್ಯಾ ವಿರಕ್ತಮಠ, ಶಾಂತಪ್ಪ ಎಸ್. ಅಕ್ಕಿ, ಸುಧೀರ ಎಸ್. ಬೋಳಾರ, ರೇಹನ್ ರಝಾ ಐನಾಪುರಿ ಹಾಗೂ ರತ್ನಾ ತೇಗೂರಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊಗಲಬಾಗಿ ಸ್ವಾಗತಿಸಿದರು. ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *