ಗ್ರಾಮೀಣ ಅಭಿವೃದ್ಧಿಯಲ್ಲಿ ಯುವ ಶಕ್ತಿ: ಎನ್.ಎಸ್.ಎಸ್. ಶಿಬಿರದಲ್ಲಿ ಶಂಕರ ಹಲಗತ್ತಿ ಕರೆ

Spread the love

ಧಾರವಾಡ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದ್ದು, ದೇಶದ ಭವಿಷ್ಯವು ಅದರ ಯುವ ಜನಾಂಗದ ಸ್ವಭಾವ, ಸಾಮರ್ಥ್ಯ ಮತ್ತು ಚಾರಿತ್ರ್ಯವನ್ನು ಅವಲಂಬಿಸಿರುತ್ತದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ (ಕ.ವಿ.ವ. ಸಂಘ) ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್.) ಮೂಲಕ ತಮ್ಮ ಶಕ್ತಿ, ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

​ಅವರು ಕ.ವಿ.ವ. ಸಂಘದ ‘ಕಲಾ ಮತ್ತು ಜಾನಪದ ಮಂಟಪ’ವು ಕಲಘಟಗಿ ಗುಡ್‌ನ್ಯೂಸ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಲಘಟಗಿ ತಾಲೂಕಿನ ಜುಂಜನಬೈಲ್ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಅತಿಥಿಗಳಾಗಿ ಮಾತನಾಡಿದರು.

​ಜುಂಜನಬೈಲ್ ಗ್ರಾಮವು ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು, ಇಲ್ಲಿಯವರೆಗೆ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಯಲ್ಲಿ ಒಂದೂ ಪ್ರಕರಣ ಅಥವಾ ಮೊಕದ್ದಮೆಗಳು ದಾಖಲಾಗದಿರುವುದು ನಿಜಕ್ಕೂ ಅನುಕರಣೀಯವಾಗಿದೆ ಎಂದು ಹಲಗತ್ತಿ ಶ್ಲಾಘಿಸಿದರು. ಊರಿನ ಹಿರಿಯರು ರಾಜಿ ಮೂಲಕವೇ ಸಮಸ್ಯೆಗಳನ್ನು ಇತ್ಯರ್ಥಗೊಳಿಸುತ್ತಿರುವುದು ಅಭಿನಂದನಾರ್ಹವಾದುದು. ಗ್ರಾಮದ ಜನರು ಶಾಂತಿ, ಸಹಕಾರ, ಸೌಹಾರ್ದಯುತವಾದ ಮೌಲ್ಯಾಧಾರಿತ ಜೀವನವನ್ನು ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

​ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಸಹಕಾರ ಗುಣಗಳನ್ನು ಬೆಳೆಸುತ್ತಿದೆ. ವಿದ್ಯಾರ್ಥಿಗಳು ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಳ್ಳಬೇಕು. ಮುಂದಿನ ಪೀಳಿಗೆಗೆ ನಿಮ್ಮ ಕಾರ್ಯಗಳೇ ಸ್ಮಾರಕಗಳಾಗಬೇಕೆಂದು ಅವರು ಆಶಯ ವ್ಯಕ್ತಪಡಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಹೇಶ ಧ. ಹೊರಕೇರಿ ಮಾತನಾಡಿ, ಎನ್.ಎಸ್.ಎಸ್. ವಾರ್ಷಿಕ ಶಿಬಿರದಲ್ಲಿ ಕಾಲೇಜಿನ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮದ ಅನೇಕ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ರಕ್ತದಾನದ ಮಹತ್ವ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸಲಾಯಿತು. ಇದೊಂದು ಯಶಸ್ವಿ ಶಿಬಿರವಾಗಿದ್ದು, ಸಹಕಾರ ನೀಡಿದ ಗ್ರಾಮದ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದರು.

​ಈ ಸಂದರ್ಭದಲ್ಲಿ ಹರ್ಲಾಪೂರದ ಸಿ.ವಾಯ್.ಸಿ.ಡಿ. ಕಲಾ ತಂಡದವರು ಮೂಲ ಜಾನಪದ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ವೇದಿಕೆ ಮೇಲಿನ ಗಣ್ಯರನ್ನು ಶಿಬಿರದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕ.ವಿ.ವ. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಣ್ಣ ಒಡ್ಡೀನ, ಆರ್.ಎಸ್. ಬಾಳನಗೌಡ್ರ, ಭೀಮು ಖಟಾವಿ, ಮತ್ತು ರೆಹಮಾನಸಾಬ್ ಸೌದಾಗರ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿಗಳಾದ ಎಂ.ಬಿ. ಉಳ್ಳಾಗಡ್ಡಿ, ಎಂ.ಎನ್. ನಿಂಬಣ್ಣವರ, ಶ್ರೀಮತಿ ಮಹಿಮಾ ದೂಪದ, ಶಶಿಧರ ಹೆಬ್ಬಳ್ಳಿಮಠ ಮುಂತಾದವರು ಉಪಸ್ಥಿತರಿದ್ದರು.

​ಜ್ಯೋತಿ ಜಾವೂರ ಅವರು ಸ್ವಾಗತಿಸಿದರು, ಗಾಯತ್ರಿ ಚಿಕ್ಕಮ್ಮನವರ ನಿರೂಪಣೆ ಮಾಡಿದರು ಮತ್ತು ಸಹೀರಾ ಮಿಠಾಯಿಗಾರ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *