
ಧಾರವಾಡ, ಡಿ. 10: ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಬದುಕಿನ ಹಕ್ಕನ್ನು ಗೌರವಿಸಿ, ಸರ್ವರನ್ನೂ ಸಮಾನವಾಗಿ ಕಾಣುವ ಸಮಾಜ ನಿರ್ಮಾಣ ಮಾಡಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾ ಭವನದಲ್ಲಿ ಬುಧವಾರದಂದು (ಡಿ.10) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುಡಿಎಚ್‌ಆರ್ ಅಂಗೀಕಾರದ ಸ್ಮರಣೆ
1948 ರ ಡಿಸೆಂಬರ್ 10 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು (Universal Declaration of Human Rights – UDHR) ಅಂಗೀಕರಿಸಿದ ಐತಿಹಾಸಿಕ ಕ್ಷಣದ ನೆನಪಿಗಾಗಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಮಾನವ ಹಕ್ಕುಗಳು ಪ್ರತಿಯೊಬ್ಬ ವ್ಯಕ್ತಿಯ ಘನತೆಯ ಬದುಕಿಗೆ ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳನ್ನು ಅರಿತುಕೊಂಡು, ಇತರರ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಅಧಿಕಾರಿಗಳಿಗೆ ಸೂಚನೆ
ಕಾನೂನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾದರೂ, ಈ ವೇಳೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ರೈತರಿಗೂ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಯಾರಿಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜದಲ್ಲಿ ಹೆಣ್ಣು ಮಕ್ಕಳು ಯಾವುದೇ ಅಂಜಿಕೆಯಿಲ್ಲದೆ, ನಿರ್ಭೀತಿಯಿಂದ ಓಡಾಡುವುದು ಕೂಡ ಅವರ ಮೂಲಭೂತ ಮಾನವ ಹಕ್ಕು ಎಂದು ಅವರು ಅಭಿಪ್ರಾಯಪಟ್ಟರು. ಪ್ರತಿ ಬಾರಿಯೂ ಜನತಾ ದರ್ಶನ ಮಾಡುವ ಮೂಲಕ ಜನರ ಸಮಸ್ಯೆಯನ್ನು ಆಲಿಸುವುದು ಮತ್ತು ಅವರಿಗೆ ಸರಿಯಾದ ರಸ್ತೆ, ಪರಿಸರವನ್ನು ನಿರ್ಮಾಣ ಮಾಡಿಕೊಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರತಿಜ್ಞಾ ವಿಧಿ ಸ್ವೀಕಾರ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಂವಿಧಾನಾತ್ಮಕವಾಗಿ ಮಾನವ ಹಕ್ಕುಗಳ ಸಂರಕ್ಷಣೆ ಕುರಿತ ಪ್ರತಿಜ್ಞಾ ವಿಧಿಯನ್ನು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಬೋಧಿಸಿದರು. ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರ ಹಕ್ಕುಗಳನ್ನು ರಕ್ಷಿಸಲು ಬದ್ಧರಾಗಿರುವುದಾಗಿ ಎಲ್ಲರೂ ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡಮನಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು ಭಾಗವಹಿಸಿದ್ದರು.

