ನಿರ್ದಿಷ್ಟ ಗುರಿ, ಛಲದಿಂದ ಜಗತ್ತನ್ನೇ ಗೆಲ್ಲಲು ಸಾಧ್ಯ: ಪ್ರೊ. ಎಂ.ವೈ. ಸಾವಂತ

Spread the love

ಧಾರವಾಡ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಿರ್ದಿಷ್ಟ ಗುರಿಯೊಂದಿಗೆ ಜೀವನದಲ್ಲಿ ಸಫಲತೆಯನ್ನು ಸಾಧಿಸಬಹುದು ಎಂದು ಖ್ಯಾತ ಮೋಡಿ ಲಿಪಿ ತಜ್ಞರಾದ ಪ್ರೊ. ಎಂ. ವೈ. ಸಾವಂತ ಅವರು ಅಭಿಪ್ರಾಯಪಟ್ಟರು. ಬುದುವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘ (ಕ.ವಿ.ವ ಸಂಘ)ದಲ್ಲಿ ಆಯೋಜಿಸಲಾಗಿದ್ದ “ಧರೆಗೆ ದೊಡ್ಡವರು” ಕಾರ್ಯಕ್ರಮದಲ್ಲಿ ಕಿಟೆಲ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

​ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಸುಮ್ಮನೆ ಸಿಗುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ, ಬದ್ಧತೆ, ಸಮಯ ಪ್ರಜ್ಞೆ ಹಾಗೂ ನಿರಂತರತೆ ಬಹಳ ಮುಖ್ಯ. ವಿದ್ಯಾರ್ಥಿಗಳಿಗೆ ಆಕಾಶದೆತ್ತರದ ಗುರಿ ಇರಲಿ. ಜೀವನದಲ್ಲಿ ವಿಫಲರಾದರೆ ಧೃತಿಗೆಡಬಾರದು, ತಾಳ್ಮೆ ಅಗತ್ಯ. ವಿಫಲತೆ ಕೊನೆಗೊಂದು ದಿನ ನಿಮ್ಮನ್ನು ಸಫಲರನ್ನಾಗಿ ಮಾಡುತ್ತದೆ. ಆತ್ಮಬಲ, ಛಲಗಳಿದ್ದರೆ ಸಾಕು ನೀವು ಜಗತ್ತನ್ನೇ ಜಯಿಸಬಹುದು. ವಿದ್ಯಾರ್ಥಿಗಳಲ್ಲಿ ಹಿಮಬಂಡೆಯಂತಹ ಶಕ್ತಿ ಸಾಮರ್ಥ್ಯವಿದ್ದು, ನಿಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ಮೊದಲು ನಿಮಗೆ ನಂಬಿಕೆ ಇರಬೇಕಷ್ಟೆ. ನಿರ್ದಿಷ್ಟ ಗುರಿ ಇದ್ದದ್ದರಿಂದಲೇ ಅಬ್ರಹಾಂ ಲಿಂಕನ್ ಜೀವನದಲ್ಲಿ ಅನೇಕ ಬಾರಿ ವಿಫಲರಾಗಿ ಕೊನೆಗೊಂದು ದಿನ ಅಮೆರಿಕಾದ ರಾಷ್ಟ್ರಾಧ್ಯಕ್ಷರಾಗಲು ಕಾರಣರಾದರು ಎಂದು ಉದಾಹರಣೆ ನೀಡಿದರು.

​ವಿದ್ಯಾರ್ಥಿಗಳಲ್ಲಿ ಸಂವಹನ ಕಲೆ ಇಲ್ಲದಿದ್ದರೆ ಪರಿಪೂರ್ಣತೆ ಬರುವುದಿಲ್ಲ ಮತ್ತು ಯಾವುದೇ ಉದ್ಯೋಗ ಹಾಗೂ ಪದವಿ ಪ್ರಾಪ್ತವಾಗುವುದಿಲ್ಲ. ವಿದ್ಯಾರ್ಥಿಗಳು ‘ಸ್ಮಾರ್ಟ್’ ಆಗಿ ಕಾರ್ಯ ನಿರ್ವಹಿಸಬೇಕು. ಜ್ಞಾನ, ಸಾಮರ್ಥ್ಯ ಹಾಗೂ ಕೌಶಲ್ಯಗಳು ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುತ್ತವೆ. ಒಳ್ಳೆಯ ನಡಾವಳಿಕೆ, ಕೃತಜ್ಞತಾಭಾವ ಇದ್ದರೆ ಎಂತಹ ಮಹಾ ಸಾಧನೆಯನ್ನಾದರೂ ಮಾಡಬಹುದು. ಪ್ರೇರಣಾತ್ಮಕ ಪುಸ್ತಕಗಳ ಅಧ್ಯಯನದ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜೀವನದಲ್ಲಿ ನನಗೆ ಯಾವುದೂ ಅಸಾಧ್ಯವಿಲ್ಲ, ಎಲ್ಲವೂ ಸಾಧ್ಯ ಎಂಬ ದೃಢ ವಿಶ್ವಾಸ ಅಗತ್ಯ. ಪ್ರಯತ್ನವಿಲ್ಲದೇ ಎಂದೂ ಫಲ ಸಿಗದು ಎಂಬುದನ್ನು ತಿಳಿಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

​ಸಂಪನ್ಮೂಲ ವ್ಯಕ್ತಿ ಡಾ. ಬಾಳಪ್ಪ ಚಿನಗುಡಿ ಅವರು ಪ್ರೊ. ಎಂ.ವೈ. ಸಾವಂತ ಅವರನ್ನು ಪರಿಚಯಿಸಿ, ಅವರು ಇತಿಹಾಸದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕಿಟೆಲ್ ಕಾಲೇಜಿನಲ್ಲಿ 36 ವರ್ಷ ಸೇವೆ ಸಲ್ಲಿಸಿದ್ದಾರೆ. ಅವರು ಶ್ರೇಷ್ಠ ಮೋಡಿ ಲಿಪಿ ತಜ್ಞರು ಮತ್ತು ಬಹುಭಾಷಾ ಪಂಡಿತರು. ಮೋಡಿ ಲಿಪಿ ಇದು ಭಾಷೆಯಲ್ಲ, ಇದನ್ನು ವಕ್ರಲಿಪಿ ಎಂದೂ ಕರೆಯುತ್ತಾರೆ. ಇದು ಮರಾಠಿ, ಪರ್ಶಿಯನ್ ಹಾಗೂ ಅರಬ್ಬಿ ಲಿಪಿ ಒಳಗೊಂಡ ಲಿಪಿಯಾಗಿದ್ದು, 13ನೇ ಶತಮಾನದಿಂದ 20ನೇ ಶತಮಾನದೊಳಗೆ ಬಳಕೆಯಲ್ಲಿತ್ತು. ಪೇಶ್ವೆಗಳ ಆಡಳಿತಕ್ಕೊಳಪಟ್ಟ ಸಂಸ್ಥಾನಗಳಲ್ಲಿ ಗ್ರಾಮ ಹಾಗೂ ಕಂದಾಯ ವಿಭಾಗದ ಎಲ್ಲಾ ದಾಖಲೆಗಳು ಈ ಲಿಪಿಯಲ್ಲಿಯೇ ಇದ್ದವು ಎಂದು ವಿವರಿಸಿದರು.

​ಕಾರ್ಯಕ್ರಮದ ವೇದಿಕೆಯ ಮೇಲೆ ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ಡಾ. ಶರಣಪ್ಪ ಆಡಕಾರ, ದಾಕ್ಷಾಯಿಣಿ ಓಲೇಕಾರ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ ಮತ್ತು ಶಿವಾನಂದ ಭಾವಿಕಟ್ಟಿ ಉಪಸ್ಥಿತರಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಟೆಲ್ ಕಾಲೇಜಿನ ಸುಮಾರು 300 ವಿದ್ಯಾರ್ಥಿಗಳೊಂದಿಗೆ ನಡೆದ ಈ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ ನೀಡಲಾಯಿತು.

Leave a Reply

Your email address will not be published. Required fields are marked *