ಹುಬ್ಬಳ್ಳಿ: ವೋಟ್ ಕಳವು (ಚೋರಿ) ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಮಾಡಿದೆ, ಬಿಜೆಪಿಗೆ ಅದರ ಅಗತ್ಯವಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಟೆಂಗಿನಕಾಯಿ, “ವೋಟ್ ಕಳವು ಮಾಡುವ ಅಗತ್ಯ ಬಿಜೆಪಿಗೆ ಇಲ್ಲ. ಒಂದು ವೇಳೆ ನಾವೇ ವೋಟ್ ಕಳವು ಮಾಡುತ್ತಿದ್ದರೆ, ಈ ಬಾರಿಯ ಚುನಾವಣೆಯಲ್ಲಿ 400 ರಿಂದ 500 ಸೀಟುಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದಿತ್ತು. ವೋಟ್ ಕಳವಿನ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇದೆ, ಇದನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು” ಎಂದು ಕಿಡಿ ಕಾರಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಟೀಕಿಸಿದ ಅವರು, “ಈ ರಾಜ್ಯ ಸರ್ಕಾರ ಒಂದೇ ಒಂದು ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಅಭಿವೃದ್ಧಿ ಸಂಪೂರ್ಣ ನಿಂತುಹೋಗಿದೆ. ಸಾಕಷ್ಟು ಕೈಗಾರಿಕೆಗಳು ರಾಜ್ಯ ಬಿಟ್ಟು ಬೇರೆ ಕಡೆಗೆ ಹೊರಟಿವೆ. ಪ್ರತಿಷ್ಠಿತ ಕಂಪನಿಗಳೂ ಸಹ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ” ಎಂದು ಆರೋಪಿಸಿದರು.
ವೋಟ್ ಕಳವಿನ ಬಗ್ಗೆ ಮಾತನಾಡುವ ಮೊದಲು, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಕಡೆ ಗಮನ ಕೊಡಬೇಕು ಎಂದು ಟೆಂಗಿನಕಾಯಿ ಕಿವಿಮಾತು ಹೇಳಿದರು. “ಮೊದಲು ಅಭಿವೃದ್ಧಿ ಮಾಡಿ. ನಂತರ ವೋಟ್ ಕಳವಿನ ಬಗ್ಗೆ ಮಾತನಾಡಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸವಾಲು ಹಾಕಿದರು.

