
ಧಾರವಾಡ ಜ.06: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶಾಮ್ ಭಟ್ ಅವರು ಇಂದು (ಜ.06) ಬೆಳಿಗ್ಗೆ ಇನಾಂವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ದಲಿತ ಕುಟುಂಬದ ಮೇಲೆ ಆಗಿರುವ ದೌರ್ಜನ್ಯ ಪ್ರಕರಣದ ಹಿನ್ನಲೆಯಲ್ಲಿ ವಾಸ್ತವಿಕ ಪರಿಸ್ಥಿತಿಯನ್ನು ಅವಲೋಕಿಸಿದರು.
ದಲಿತ ಕುಟುಂಬಗಳು ವಾಸಿಸುವ ಓಣಿ ಹಾಗೂ ದೌರ್ಜನ್ಯಕ್ಕೆ ಒಳಗಾದ ವಿವೇಕಾನಂದ ಅವರ ಮನೆ ಹಾಗೂ ದೌರ್ಜನ್ಯ ಮತ್ತು ಕೊಲೆ ಕೃತ್ಯ ನಡೆದ ಸ್ಥಳ ಪರಿಶೀಲಿಸಿ, ಸ್ಥಳೀಯ ನಿವಾಸಿಗಳಿಂದ, ಪೆÇಲೀಸ್ ಅಧಿಕಾರಿಗಳಿಂದ ಹಾಗೂ ಇತರರಿಂದ ವಿವರವಾದ ಮಾಹಿತಿಯನ್ನು ಅವರು ಪಡೆದುಕೊಂಡರು.
ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಯೋಗದಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಮತ್ತು ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೆÇಲೀಸ್ ಇಲಾಖೆ ಮತ್ತು ಸಮಜ ಕಲ್ಯಾಣ ಇಲಾಖೆಯಿಂದ ಸಂಯುಕ್ತವಾಗಿ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು.
ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಅವಕಾಶವಿಲ್ಲ ಎಂಬುದನ್ನು ಎಲ್ಲರೂ ಮನಗಂಡು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯೋಗದ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ದಲಿತ ಕುಟುಂಬಗಳಿಗೆ ಅಗತ್ಯ ಭದ್ರತೆ ಒದಗಿಸುವುದು. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗ ದೊರಕುವಂತೆ ನೋಡಿಕೊಳ್ಳುವುದು ಹಾಗೂ ಘಟನೆಗೆ ಸಂಬಂಧಿಸಿದಂತೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದರು.
ಮುಂಬರುವ ದಿನಗಳಲ್ಲಿಯೂ ಸಹ ಗ್ರಾಮಗಳಲ್ಲಿ ಶಾಂತಿ ಸಭೆಗಳನ್ನು ಜರುಗಿಸಿ, ಜನರಲ್ಲಿನ ಭಯವನ್ನು ದೂರ ಮಾಡಿ, ವಿಶ್ವಾಸ ವಾತಾವರಣ ನಿರ್ಮಿಸುವಂತೆ ಪೆÇಲೀಸ್ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು. ಅಲ್ಲದೆ, ಮಾನಸಿಕ ಧೈರ್ಯ, ಕಾನೂನು ಸಹಾಯ ಹಾಗೂ ಅಗತ್ಯ ಪರಿಹಾರ ಕಲ್ಪಿಸುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ನಿರ್ದೇಶನವನ್ನು ನೀಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಇನಾಂವೀರಾಪುರ ಗ್ರಾಮದ ಪ್ರಕರಣದ ಕುರಿತು ತನಿಖೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಲು, ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಪರವಾಗಿ ವಿಶೇಷ ಅಭಿಯೋಜಕರನ್ನು ನೇಮಿಸಲು ಮತ್ತು ಸದರಿ ಕುಟುಂಬಕ್ಕೆ ವಿಶೇಷ ಪರಿಹಾರ ನೀಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಪ್ರಸ್ತಾವನೆ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಜಿಲ್ಲಾಡಳಿತದಿಂದ ಗ್ರಾಮದಲ್ಲಿ ಶಾಂತಿ ಸಭೆಯನ್ನು ಜರುಗಿಸಲಾಗಿದ್ದು, ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿ ಪರಸ್ಪರ ಸಹೋದರತ್ವ ಮತ್ತು ವಿಶ್ವಾಸದಿಂದ ಬದುಕುವುದಾಗಿ ಗ್ರಾಮಸ್ಥರು ಭರವಸೆ ನೀಡಿದ್ದಾರೆ. ಸ್ಥಳೀಯ ನಿವಾಸಿಗಳ ಸಲಹೆಗಳನ್ನು ಆಲಿಸಲಾಗಿದೆ. ಗ್ರಾಮ ಸಭೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಹಾಗೂ ಯಾವುದೇ ರೀತಿಯ ತಪ್ಪು ಮಾಹಿತಿ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಗ್ರಾಮದಲ್ಲಿ ಶಾಂತಿ ಸಭೆ ಮೂಲಕ ಗ್ರಾಮದ ಸಾರ್ವಜನಿಕರ ಭಯ ಮತ್ತು ಆತಂಕವನ್ನು ದೂರ ಮಾಡಿ, ಕಾನೂನು ಮತ್ತು ಆಡಳಿತದ ಮೇಲೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಹ ಅಗತ್ಯವಿದ್ದರೆ ಮತ್ತಷ್ಟು ಶಾಂತಿ, ಸೌಹಾರ್ದತೆಯ ಸಭೆಗಳನ್ನು ಆಯೋಜಿಸಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಗುಂಜನ್ ಆರ್ಯ, ಡಿವೈಎಸ್‍ಪಿ ವಿನೋದ ಮುಕ್ತೆದಾರ, ತಹಶಿಲ್ದಾರ ಜಿ.ಆರ್.ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನಸ್ಪಕ್ಟರ್ ಮುರಗೇಶ ಚನ್ನಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಸಹಾಯಕ ನಿರ್ದೇಶಕಿ ಪ್ರೀಯದರ್ಶಿನಿ ಹಿರೇಮಠ, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವೇಕಾನಂದ ದೊಡಮನಿ ಕುಟುಂಬದ ಸದಸ್ಯರು ಹಾಗೂ ಇತರರು ಇದ್ದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ: ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶಾಮ್ ಭಟ್ ಅವರು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದ ದಲಿತ ದೌರ್ಜನ್ಯ ಪೀಡಿತ ಕುಟುಂಬ ಸದಸ್ಯರ ಭೇಟಿ ಮತ್ತು ಗ್ರಾಮದಲ್ಲಿನ ವಾಸ್ತವಿಕ ಪರಿಸ್ಥಿತಿಯ ಅಧ್ಯಯನದ ನಂತರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿದರು.
ಸಭೆಯಲ್ಲಿ ಮಾತನಾಡಿ, ದೌರ್ಜನ್ಯ ಪೀಡಿತ ಕುಟುಂಬಕ್ಕೆ ಭದ್ರತೆ ಕುರಿತು ಸಂಪೂರ್ಣ ಭರವಸೆ ಮೂಡಿಸಬೇಕು. ಗ್ರಾಮದಲ್ಲಿ ಎಲ್ಲ ಕುಟುಂಬಗಳು ಪ್ರಕರಣ ಪೂರ್ವದಲ್ಲಿ ಇದ್ದಂತೆ ಅನೊನ್ಯವಾಗಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ವಾಸಿಸುವಂತೆ ವಾತಾವರಣ ರೂಪಿಸಬೇಕು. ಈ ನಿಟ್ಟಿನಲ್ಲಿ ಅಗತ್ಯವಿದ್ದರೆ, ಗ್ರಾಮದಲ್ಲಿ ಮತ್ತಷ್ಟು ಸಭೆಗಳನ್ನು ಆಯೋಜಿಸಬೇಕು. ಗ್ರಾಮಸ್ಥರಲ್ಲಿ ಆಗಲಿ ಅಥವಾ ದೊಡಮನಿ ಕುಟುಂಬದಲ್ಲಿ ಯಾವುದೇ ಭಯದ ವಾತಾವರಣ ಇರದಂತೆ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿ ಅಥವಾ ಕುಟುಂಬ ಸದಸ್ಯರ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಮುನ್ನಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಪ್ರಕರಣದ ತನಿಖೆಯನ್ನು ಈಗಾಗಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿದೆ. ಪೊಲೀಸ್ ಇಲಾಖೆ ತನಿಖೆಗೆ ಸಹಕಾರ ನೀಡಿ, ಗ್ರಾಮದಲ್ಲಿ ಅಗತ್ಯವಿದ್ದರೆ ಇನ್ನಷ್ಟು ಸೂಕ್ತ ಬಂದೋಬಸ್ತ್ ಕ್ರಮವಹಿಸಬೇಕು. ಡಿಸಿಆರ್‍ಇ ಪಾರದರ್ಶಕ ತನಿಖೆ ಮಾಡಿ ಆದಷ್ಟು ಬೇಗನೆ ನ್ಯಾಯಾಲಯಕ್ಕೆ ದೊಷಾರೋಪ ಪಟ್ಟಿಯನ್ನು ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆ ನಿಯಮಾನುಸಾರ ಕುಟುಂಬಕ್ಕೆ ಅಗತ್ಯ ನೆರವು ನೀಡಬೇಕು. ಜಿಲ್ಲಾಡಳಿತ ಪ್ರಕರಣದ ಕುರಿತು ಸಂಬಂಧಿಸಿದ ಎಲ್ಲ ಇಲಾಖೆಗಳಿಂದ ಕೈಗೊಂಡ ಕ್ರಮಗಳ ಬಗ್ಗೆ ವರದಿ ಪಡೆದು ಆಯೋಗಕ್ಕೆ ಸಲ್ಲಿಸಬೇಕು. ಮತ್ತು ಗ್ರಾಮದ ಶಾಂತಿ, ಸುವ್ಯವಸ್ಥೆ ಕಾಪಡಲು ಜಿಲ್ಲಾಡಳಿತ ನಿಗಾ ವಹಿಸಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೊಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಡಿವೈಎಸ್‍ಪಿ ವಿನೋದ ಮುಕ್ತೆದಾರ, ಡಿಸಿಆರ್‍ಇ ಡಿವೈಎಸ್‍ಪಿ ಸಂದೀಪಸಿಂಗ್ ಮುರಗೋಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಮ್.ಹೊನಕೇರಿ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ.ಎಮ್.ಎಸ್., ತಹಶಿಲ್ದಾರ ಜಿ.ಆರ್.ಮಜ್ಜಗಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನಸ್ಪಕ್ಟರ್ ಮುರಗೇಶ ಚನ್ನಣ್ಣನವರ, ವೀರಭದ್ರಪ್ಪ ಕಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಸಹಾಯಕ ನಿರ್ದೇಶಕಿ ಪ್ರೀಯದರ್ಶಿನಿ ಹಿರೇಮಠ, ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅತೀಕಾ ಸಿದ್ದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

