
ಕುಂದಗೋಳ: ತಾಲೂಕಿನ ಪಶುಪತಿಹಾಳ ಗ್ರಾಮ ಪಂಚಾಯಿತಿ ಆಡಳಿತ ವೈಫಲ್ಯದ ಕೇಂದ್ರವಾಗಿ ಪರಿಣಮಿಸಿದ್ದು, ಸಿಬ್ಬಂದಿಗಳ ಅನಗತ್ಯ ವಜಾ ಹಾಗೂ ಕರ್ತವ್ಯದ ಅವಧಿಯಲ್ಲಿ ಸಿಬ್ಬಂದಿಗಳ ಗೈರುಹಾಜರಿಯಿಂದ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಉಂಟಾಗಿದೆ. ಪಂಚಾಯಿತಿ ಆಡಳಿತದ ಇಂತಹ ಬೇಜವಾಬ್ದಾರಿತನವನ್ನು ಖಂಡಿಸಿ ಗ್ರಾಮದ ತಿಪ್ಪಣ್ಣ ಎಂಬುವವರು ನೇರವಾಗಿ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಸೆಂಬರ್ 16ರಂದು ಮಧ್ಯಾಹ್ನ 3.30 ಗಂಟೆಯಾದರೂ ಪಂಚಾಯಿತಿ ಕಚೇರಿಯಲ್ಲಿ ಬಹುತೇಕ ಕುರ್ಚಿಗಳು ಖಾಲಿ ಇರುವುದನ್ನು ಕಂಡು ಅಚ್ಚರಿಗೊಂಡ ತಿಪ್ಪಣ್ಣ, ಸಾರ್ವಜನಿಕರ ಕೆಲಸ ಮಾಡಿಕೊಡಬೇಕಾದ ಸಿಬ್ಬಂದಿಗಳು ಕರ್ತವ್ಯದ ವೇಳೆಯಲ್ಲಿ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಕರ್ತವ್ಯದ ಸಮಯದಲ್ಲಿ ಸಿಬ್ಬಂದಿಗಳ ಗೈರುಹಾಜರಿಯೇ ಪಂಚಾಯಿತಿ ಆಡಳಿತದ ಬೇಜವಾಬ್ದಾರಿತನಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ, ಪಂಚತಂತ್ರ 2.0 ಯೋಜನೆಯ ಅಡಿಯಲ್ಲಿ ದಕ್ಷವಾಗಿ ಕೆಲಸ ನಿರ್ವಹಿಸುತ್ತಿರುವ ಕ್ಲರ್ಕ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಮಂಜುನಾಥ ಮಲ್ಲಾಪೂರ ಅವರನ್ನು ಯಾವುದೇ ಸೂಕ್ತ ಕಾರಣವಿಲ್ಲದೆ ಪದೇಪದೇ ಕೆಲಸದಿಂದ ವಜಾ ಮಾಡುತ್ತಿರುವ ಕ್ರಮವನ್ನು ಅವರು ತೀವ್ರವಾಗಿ ಖಂಡಿಸಿದರು. ಒಬ್ಬ ಸಮರ್ಥ ಸಿಬ್ಬಂದಿಯನ್ನು ನಿರಂತರವಾಗಿ ವಜಾ ಮಾಡುವ ಹಿಂದೆ ಯಾವ ಉದ್ದೇಶವಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಅವರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮೊಹಮ್ಮದ್ ಯೂಸೂಪ್ ಚಕ್ಕೂಲಿ ಅವರ ಸಮ್ಮುಖದಲ್ಲೇ ಈ ಆಡಳಿತಾತ್ಮಕ ವೈಫಲ್ಯಗಳನ್ನು ಬಹಿರಂಗಪಡಿಸಿದ ತಿಪ್ಪಣ್ಣ, ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳು ಜನರಿಗೆ ಸ್ಪಂದಿಸದೇ ಇದ್ದರೆ ಪಂಚಾಯಿತಿಯ ಅಸ್ತಿತ್ವಕ್ಕೇ ಅರ್ಥವಿಲ್ಲ ಎಂದು ಕಿಡಿಕಾರಿದರು.
ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಗಂಭೀರ ಸ್ವರೂಪದ ಆಡಳಿತ ಲೋಪದೋಷಗಳ ಕುರಿತು ಸ್ಥಳೀಯ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

