ಧಾರವಾಡ.19: ಚೆನ್ನೈಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ ಮಾನ್ಯತೆ ಪಡೆದ ಮಿಟ್ಕಾನ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯು ವಾಯುಮಿತ್ರ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯಡಿ ‘ವಿಂಡ್ ಫಾರ್ಮ್ ಎಂಜಿನಿಯರ್ (ಹಂತ–5)’ ತರಬೇತಿ ಕಾರ್ಯಕ್ರಮವನ್ನು ಡಿಸೆಂಬರ್ 2025ರಲ್ಲಿ ಬೆಳಗಾವಿಯ ಶಿವಬಸವ ನಗರದ ಎಸ್.ಜಿ. ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ.
ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನದ ವಿಂಡ್ ಎನರ್ಜಿ ಕ್ಷೇತ್ರದಲ್ಲಿ ವೃತ್ತಿ ಬೆಳೆಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಹಾಗೂ ಸುವರ್ಣಾವಕಾಶವಾಗಿದೆ. ಈ ಕಾರ್ಯಕ್ರಮವು 81 ದಿನಗಳ ಅವಧಿಯುದಾಗಿ, 540 ಗಂಟೆಗಳ ಸವಿಸ್ತಾರ ತರಬೇತಿಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಪೂರ್ಣ ಉಚಿತ ವಸತಿ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಯಾವುದೇ ತರಬೇತಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ತರಬೇತಿ ವೆಚ್ಚವನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ, ಚೆನ್ನೈ ಹಾಗೂ ಭಾರತ ಸರ್ಕಾರ ಭರಿಸುತ್ತದೆ.
ಬಿಇ, ಬಿ.ಟೆಕ್ ಪದವಿ ಪಡೆದ ಅಭ್ಯರ್ಥಿಗಳು, ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿ ಮೂರು ವರ್ಷಗಳ ಅನುಭವ ಹೊಂದಿರುವ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಹರಾಗಿರುತ್ತಾರೆ. ತರಬೇತಿ ನಂತರ ನವದೆಹಲಿಯ ಸ್ಕಿಲ್ ಕೌನ್ಸಿಲ್ ಫಾರ್ ಗ್ರೀನ್ ಜಾಬ್ಸ್ (SCGJ) ಮೂಲಕ ಮೌಲ್ಯಮಾಪನ ಜರುಗಲಿದ್ದು, ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ (NIWE), ಚೆನ್ನೈಯಿಂದ ಪ್ರಮಾಣಪತ್ರ ನೀಡಲಾಗುತ್ತದೆ.
ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು 2025ರ ನವೆಂಬರ್ 25ರೊಳಗಾಗಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 8956433290, 9740126100, 8147271334 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ ಎಂದು ಮಿಟ್ಕಾನ್ ಕನ್ಸಲ್ಟೆನ್ಸಿ ಮತ್ತು ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ನ ಮ್ಯಾನೇಜರ್ ಭೀಮಪ್ಪ ರೇವಣಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

