

ಧಾರವಾಡ, ನ. 18: ಪದ್ಮಭೂಷಣ ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ಅವರ ಸ್ಮರಣೆಯಲ್ಲಿ, ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ವಚನ ಸಂಗೀತೋತ್ಸವ–2025 ಕಾರ್ಯಕ್ರಮವನ್ನು ನವೆಂಬರ್ 22 ಮತ್ತು 23, 2025 ರಂದು ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷರಾದ ಪಂ. ಕೈವಲ್ಯಕುಮಾರ ಗುರವ ಅವರು ಪ್ರಕಟಿಸಿದರು.
ಅವರು ಮಂಗಳವಾರದಂದು(ನ. 18) ಸಂಜೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ವಚನ ಸಂಗೀತೋತ್ಸವವನ್ನು ಸಂಜೆ 5:30ರಿಂದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.
ವಾರ್ಷಿಕ ಪ್ರಶಸ್ತಿ ಗೌರವಧನ ಹೆಚ್ಚಳ
ಮುಂದಿನ ವರ್ಷದಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಟ್ರಸ್ಟ್ ವತಿಯಿಂದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಜೊತೆಗೆ, ಟ್ರಸ್ಟ್ ನೀಡುವ ವಾರ್ಷಿಕ ಪ್ರಶಸ್ತಿಯ ಗೌರವಧನ ಮೊತ್ತವನ್ನು ಹೆಚ್ಚಿಸಲಾಗುವುದು ಎಂದು ಪಂ. ಕೈವಲ್ಯಕುಮಾರ ಗುರವ ಹೇಳಿದರು.
ಕಾರ್ಯಕ್ರಮದ ವಿವರಗಳು
ನವೆಂಬರ್ 22 ರ ಕಾರ್ಯಕ್ರಮ
ಈ ದಿನದ ವಚನ ಸಂಗೀತೋತ್ಸವವನ್ನು ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಅವರು ಉದ್ಘಾಟಿಸಲಿದ್ದಾರೆ. ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ) ಅಧ್ಯಕ್ಷ ಪಂ. ಎಂ. ವೆಂಕಟೇಶಕುಮಾರ ಅವರು ಅತಿಥಿಯಾಗಿ, ಪಂ. ಕೈವಲ್ಯಕುಮಾರ ಗುರವ ಅವರು ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.
ಸಂಗೀತಾಭಿವೃದ್ಧಿಯಲ್ಲಿ ಬೆಂಗಳೂರಿನ ರೇಶ್ಮಾ ಭಟ್, ಯಾದಗಿರಿಯ ಬಸವರಾಜ ಭಂಟನೂರ, ಕಲಬುರ್ಗಿಯ ಶಂಕರ ಹೂಗಾರ ಮತ್ತು ತುಮಕೂರಿನ ಸಿದ್ದೇಂದ್ರಕುಮಾರ ಹಿರೇಮಠ ಅವರು ಸಹಕಲಾವಿದರೊಂದಿಗೆ ವಚನ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ನವೆಂಬರ್ 23 ರ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ, ಮತ್ತು ಟ್ರಸ್ಟ್ ಸದಸ್ಯೆ ಭಾರತಿದೇವಿ ಬಸವರಾಜ ರಾಜಗುರು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ದಿನ ಬೆಂಗಳೂರಿನ ಮಾಲಾಶ್ರೀ ಕಣವಿ, ಧಾರವಾಡದ ಕುಮಾರ ಮರಡೂರ, ಮೈಸೂರಿನ ಆನಂದಕುಮಾರ ಕಂಬಳಿಹಾಳ ಹಾಗೂ ಬೆಂಗಳೂರಿನ ಅನಿರುದ್ಧ ಐತಾಳ ಅವರು ಸಹಕಲಾವಿದರೊಂದಿಗೆ ವಚನ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಟ್ರಸ್ಟ್ ಸದಸ್ಯರು ನಿಜಗುಣಿ ರಾಜಗುರು, ಡಾ. ಅನಿಲ ಮೇತ್ರಿ, ಸುಪ್ರಿಯಾ ಭಟ್ ಮತ್ತು ಶಾಂತಿಲಿಂಗಪ್ಪ ದೇಸಾಯಿ ಉಪಸ್ಥಿತರಿದ್ದರು.

