
ನವಲಗುಂದ: ಪಟ್ಟಣದಲ್ಲಿ ಪರಮಪೂಜ್ಯ ಶ್ರೀ ಹುರಕಡ್ಲಿ ಅಜ್ಜನವರ ರಥೋತ್ಸವ ಪೂಜೆ ಹಾಗೂ 36ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಇಂದು ಮಧ್ಯಾಹ್ನ ವೇಳೆಗೆ ಶ್ರೀ ಹುರಕಡ್ಲಿ ಅಜ್ಜನವರ ರಥೋತ್ಸವ ಪೂಜೆ ನೆರವೇರಲಿದ್ದು, ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ರಥೋತ್ಸವಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಸಂಜೆ 6 ಗಂಟೆಗೆ ಶ್ರೀ ಬೂದೇಶ್ವರ ಕೋಲಾಟ ಮೇಳ (ಬೂದೇಶ್ವರ ಹೊಸಳ್ಳಿ) ಹಾಗೂ ಮಹಿಳಾ ಡೊಳ್ಳಿನ ಮೇಳದೊಂದಿಗೆ ಡೊಳ್ಳು, ಕೋಲಾಟ, ಕರಡಿ ಮಜಲು, ಮಂಗಳವಾದ್ಯಗಳು ಮತ್ತು ಸುಮಂಗಲೆಯರ ಆರತಿಗಳೊಂದಿಗೆ ಪಲ್ಲಕ್ಕಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ವೇಳೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ನಂತರ ಪ್ರಸಾದ ವಿತರಣೆ ಮಾಡಲಾಗುವುದು.
ಜ. 3ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಹುರಕಡ್ಲಿ ಅಜ್ಜನವರ 36ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಗಾವಿಯ ಕಾರಂಜಿಮಠದ ಉತ್ತರಾಧಿಕಾರಿ ಡಾ. ಶಿವಯೋಗಿ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಶಾಸಕ ಎನ್.ಎಚ್. ಕೋನರಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಹುರಕಡ್ಲಿ ಅಜ್ಜನವರ 125ನೇ ವಿಶೇಷ ಜನ್ಮದಿನೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಧಾರವಾಡ ಹೈಕೋರ್ಟ್ ವಕೀಲರಾದ ಸಿ.ಎಸ್. ಪಾಟೀಲ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ತುಮಕೂರು ಶ್ರೀದೇವಿ ಮೆಡಿಕಲ್ ಕಾಲೇಜಿನ ಸಂಸ್ಥಾಪಕ ಡಾ. ಎಂ.ಆರ್. ಹುಲಿನಾಯ್ಕರ್ ಉಪಸ್ಥಿತರಿರುವರು. ಸಂಗೀತ ಸೇವೆಯನ್ನು ಸಾವನಸಿಂಗ ಮೊಕಾಶಿ, ಅಡಿವೆಪ್ಪ ಕಮತರ ಹಾಗೂ ಮೋಹನ ಗೌಡಪ್ಪ ಸಲ್ಲಿಸಲಿದ್ದಾರೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹುರಕಡ್ಲಿ ಅಜ್ಜನವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

