ವ್ಯಾಪಾರವು ರಾಷ್ಟ್ರದ ಪ್ರಗತಿಯ ಜೀವನಾಡಿ: ಪ್ರೊ. ಎಂ. ಆರ್. ಸೊಲ್ಲಾಪೂರ ಅಭಿಪ್ರಾಯ

Spread the love

ಧಾರವಾಡ: ವ್ಯಾಪಾರವು ರಾಷ್ಟ್ರದ ಪ್ರಗತಿಯ ಜೀವನಾಡಿಯಾಗಿದ್ದು, ನಾಗರಿಕತೆಯ ಉದಯದೊಂದಿಗೆ ಇದು ಅವಿಭಾಜ್ಯವಾಗಿ ಬೆಳೆದು ಬಂದಿದೆ ಎಂದು ತುಮಕೂರು ತಾಂತ್ರಿಕ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಎಂ. ಆರ್. ಸೊಲ್ಲಾಪೂರ ಅವರು ಹೇಳಿದರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಣಿಜ್ಯ ಮತ್ತು ಆಡಳಿತ ಮಂಟಪ’ದ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ನಮ್ಮ ಇಡೀ ಬದುಕು ವಾಣಿಜ್ಯದೊಂದಿಗೆ ಬೆಸೆದುಕೊಂಡಿದೆ. ವಾಣಿಜ್ಯದ ಜೊತೆಗೆ ಸಮರ್ಥ ಆಡಳಿತವಿದ್ದಾಗ ಮಾತ್ರ ಅಭಿವೃದ್ಧಿಗೆ ಹೊಸ ಶಕ್ತಿ ಬರಲು ಸಾಧ್ಯ. ಕರ್ನಾಟಕ ವಿದ್ಯಾವರ್ಧಕ ಸಂಘವು ಸಾಹಿತ್ಯದ ಜೊತೆಗೆ ವಾಣಿಜ್ಯ ಮತ್ತು ಆಡಳಿತ ಕ್ಷೇತ್ರಗಳತ್ತ ಗಮನಹರಿಸಿರುವುದು ಶ್ಲಾಘನೀಯ. ಇಂತಹ ವೇದಿಕೆಗಳ ಮೂಲಕ ಸ್ಥಳೀಯ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಉಪಯುಕ್ತವಾಗುವ ಚಿಂತನ-ಮಂಥನಗಳು ಜರುಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

​ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ವ್ಯವಹಾರ ಅಧ್ಯಯನ ಸಂಸ್ಥೆಯ ಡೀನ್ ಪ್ರೊ. ಎನ್. ರಾಮಾಂಜನೇಯಲು ಅವರು ವಿಶೇಷ ಉಪನ್ಯಾಸ ನೀಡಿ, ಕೃಷಿಯಷ್ಟೇ ವ್ಯಾಪಾರವೂ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದರು. ಇಂದು ಜಾಗತೀಕರಣದ ಪ್ರಭಾವದಿಂದ ಇಡೀ ವಿಶ್ವವೇ ಒಂದು ಮಾರುಕಟ್ಟೆಯಾಗಿ ಮಾರ್ಪಟ್ಟಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಸಂಪತ್ತಿನ ಸಮಾನ ಹಂಚಿಕೆಯಾಗಬೇಕು ಮತ್ತು ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಸಿಗಬೇಕು. ಸುಸ್ಥಿರ ಅಭಿವೃದ್ಧಿಯ ಮೂಲಕ ಮುಂದಿನ ಪೀಳಿಗೆಗೂ ಸಂಪನ್ಮೂಲಗಳನ್ನು ಉಳಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವಪ್ರಭು ಹೊಸಕೇರಿ ಅವರು ಮಾತನಾಡಿ, ಸಂಘವು ದೂರದೃಷ್ಟಿಯಿಂದ ಈ ಮಂಟಪವನ್ನು ರಚಿಸಿದೆ. ಇಂದಿನ ಸ್ಮಾರ್ಟ್ ಬಜಾರ್‌ಗಳ ಪೈಪೋಟಿಯಿಂದ ಸಣ್ಣ ವ್ಯಾಪಾರಿಗಳ ಬದುಕು ಕಷ್ಟಕರವಾಗುತ್ತಿದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ವ್ಯಾಪಾರದಲ್ಲಿ ನೀತಿ ಎಂಬುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

​ಕಾರ್ಯಕ್ರಮದಲ್ಲಿ ಸಿದ್ಧರಾಮ ಹಿಪ್ಪರಗಿ ಸ್ವಾಗತಿಸಿದರು. ಮಂಟಪದ ಸಂಚಾಲಕ ಡಾ. ಧನವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪತ್ರೆಮ್ಮ ಧಾರವಾಡ ಕಾರ್ಯಕ್ರಮ ನಿರೂಪಿಸಿದರೆ, ಶಂಕ್ರಮ್ಮ ಹೂಲಿಕಟ್ಟಿ ವಂದಿಸಿದರು. ವೇದಿಕೆಯ ಮೇಲೆ ಶಂಕರ ಹಲಗತ್ತಿ, ಸತೀಶ ತುರಮರಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *